ಕಲಬುರಗಿ: ಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಲಂಚ ಮಂಚದ ಸರಕಾರ. ಯುವಕರಿಗೆ ನೌಕರಿ ಬೇಕೆಂದರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು. ಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೊತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಪ್ರತಿಯೊಂದು ಹುದ್ದೆಗಳು ಮಾರಾಟಕ್ಕಿದೆ. ಹಣ ಕೊಟ್ಟರೆ ಬಿಜೆಪಿ ಸರ್ಕಾರ ಏನು ಬೇಕಾದರೂ ಮಾಡಲು ಸಿದ್ಧ. ಈ ಸರ್ಕಾರ ಮೇಲೆ ಯುವಕರು ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.
ಮಂತ್ರಿ ಮಂಡಲದ ಮೇಲೆ ಸಿಎಂಗೆ ಹಿಡಿತವಿಲ್ಲ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಬಿಜೆಪಿ ಅವರ ಮೇಲೆ ಹಿಡಿತ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ಅವರೇ ಬೆಂಕಿ ಹಚ್ಚುತ್ತಿದ್ದಾರೆ. ನಾವು ಬೆಂಕಿ ಹತ್ತಿದೆ ಅಂತಾ ಹೇಳಿದರೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ದುಡ್ಡು ಕೊಡದಿದ್ದರೆ ಈ ಸರ್ಕಾರದಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆ ಎಂದರು.