ಕಾರ್ಕಳ: ಹೆಬ್ರಿ ನಾಡ್ಪಾಲು ಸೀತಾನದಿಯ ಭೋಜಶೆಟ್ಟಿ, ಸುರೇಶ್ ಶೆಟ್ಟಿಯನ್ನು ಗುಂಡು ಹಾರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ತಂಡವು ಆರೋಪಿ ನಕ್ಸಲ್ವಾದಿ ವೀರಮಣಿ ಅಲಿಯಾಸ್ ಶಂಕರಪ್ಪ ಅಲಿಯಾಸ್ ವಜ್ರಮುನಿ(57)ಯನ್ನು ಕಳೆದ ಎರಡು ದಿನಗಳಿಂದ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಪೂರ್ಣಗೊಂಡಿದೆ.
ಕಾರ್ಕಳ ನ್ಯಾಯಾಲಯ ಅದೇಶದಂತೆ ಆರೋಪಿ ವೀರಮಣಿಯನ್ನು ಮರಳಿ ಕೊಯಮತ್ತೂರು ಜೈಲಿಗೆ ಕಳುಹಿಸಲಾಗಿದೆ. ತಮಿಳುನಾಡು ಕೊಯಮತ್ತೂರಿನಲ್ಲಿ ಆರೋಪಿ ವೀರಮಣಿಯನ್ನು ಕಳೆದ ಕೆಲ ತಿಂಗಳುಗಳ ಹಿಂದೆ ತಮಿಳುನಾಡು ಪೊಲೀಸರು ಬಂಧಿಸಿದ್ದರು. 2008ರಲ್ಲಿ ನಡೆದ ಹೆಬಿ ನಾಡ್ಪಾಲು ಸೀತಾನದಿಯ ಶಿಕ್ಷಕ ಭೋಜಶೆಟ್ಟಿ ಹಾಗೂ ಕೃಷಿಕ ಸುರೇಶ್ ಶೆಟ್ಟಿಯ ಕೊಲೆ ಪ್ರಕರಣದ ವಿಚಾರಣೆಗಾಗಿ ವೀರಮಣಿಯನ್ನು ಕಾರ್ಕಳಕ್ಕೆ ಕರೆತರಲಾಗಿತ್ತು. ಮನೋಹರ್, ಸಂಜೀವ ಕುಮಾರ್, ವಸಂತ ಅಲಿಯಾಸ್ ಆನಂದ, ದೇವೇಂದ್ರ ಯಾನೆ ವಿಷ್ಣು, ಬಿ.ಜೆ.ಕೃಷ್ಣಮೂರ್ತಿ, ನಂದಕುಮಾರ್, ನೀಲಗುಳಿ ಪದ್ಮನಾಭ ಅಲಿಯಾಸ್ ಹರೀಶ್, ಚಂದ್ರಶೇಖರ್, ರಮೇಶ್ ಅಲಿಯಾಸ್ ಶಿವಕುಮಾರ್, ವೀರಮಣಿ ಅಲಿಯಾಸ್ ಈಶ್ವರ ಅಲಿಯಾಸ್ ಶಂಕರಪ್ಪ ಅಲಿಯಾಸ್ ವಜ್ರಮುನಿ, ಆಶಾ ಅಲಿಯಾಸ್ ಸುಧಾ ಅಲಿಯಾಸ್ ಪಲ್ಲವಿ ಅಲಿಯಾಸ್ ಪವಿತ್ರ ಸೇರಿದಂತೆ ಒಟ್ಟು 11 ಮಂದಿ ನಕ್ಸಲೀಯ ಆರೋಪಿಗಳಾಗಿದ್ದಾರೆ.
ನಕ್ಸಲ್ ಚಟುವಟಿಕೆಯ ಕುರಿತು ಮೃತ ಭೋಜಶೆಟ್ಟಿ ಪೊಲೀಸ್ ಮಾಹಿತಿದಾರನಾಗಿ ಕೆಲಸ ನಿರ್ವಹಿಸುತ್ತಿದ್ದರೆಂಬ ಕಾರಣಕ್ಕಾಗಿ ಅವರ ಮನೆಗೆ ನಕ್ಸಲೀರತ ತಂಡವೊಂದು ದಾಳಿ ನಡೆಸಿ ಬಂದೂಕಿನಿಂದ ಗುಂಡು ಹಾರಿಸಿ ಜೀವಬೆದರಿಕೆಯೊಡ್ಡಿತ್ತು. ಆ ಸಂದರ್ಭದಲ್ಲಿ ಶಿಕ್ಷಕ ಭೋಜ ಶೆಟ್ಟಿ ಮನೆಯಲ್ಲಿ ಇಡಲಾಗಿದ್ದ ತಲವಾರು ಝಳಪಿಸಿ ನಕ್ಸಲೀಯರನ್ನು ಹಿಮ್ಮೆಟ್ಟಿಸಿದರು. ಈ ಘಟನೆಯ ಬಳಿಕ ಎರಡನೇ ಬಾರಿ ನಡೆಸಿದ ದಾಳಿಯಲ್ಲಿ ಬೋಜಶೆಟ್ಟಿ ಸಾವಿಗೀಡಾಗಿದ್ದರು.
ಹೆಬ್ರಿ ಠಾಣಾಧಿಕಾರಿ ಸೀರಾರಾಮ ನೇತೃತ್ವದ ಪೊಲೀಸ ತಂಡ ಹಾಗೂ ನಕ್ಸಲ್ ನಿಗ್ರಹ ದಳದ ಬಂದೂಕುದಾರಿಗಳ ಪಡೆಯು ಆರೋಪಿ ವೀರಮಣಿಯನ್ನು ಬುಧವಾರ ಮರಳಿ ಕೊಯಂಮತ್ತೂರು ಜೈಲಿಗೆ ಒಪ್ಪಿಸಲು ತೆರಳಿದ್ದಾರೆ. ಬುಧವಾರ ಬೆಳಿಗ್ಗೆ ಆರೋಪಿ ವೀರಮಣಿಯನ್ನು ಹೆಬ್ರಿ ಠಾಣಾಧಿಕಾರಿ ಸೀತಾರಾಮ ನೇತೃತ್ವದಲ್ಲಿ ಬಿಗುಭದ್ರತೆಯೊಂದಿಗೆ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಮುಖ್ಯವೈದ್ಯಧಿಕಾರಿ ಡಾ. ಜ್ಞಾನೇಶ್ ಅವರು ವೀರಮಣಿಯನ್ನು ತಪಾಸಣೆ ನಡೆಸಿದ್ದು ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂಬ ವರದಿಯನ್ನು ನೀಡಿದ್ದರು. ಅಲ್ಲಿಂದ ಕರೆದೊಯ್ಯತ್ತಿರುವ ಸಂದರ್ಭದಲ್ಲಿ ಪೊಲೀಸರ ಸಮ್ಮಖದಲ್ಲಿ ನಕ್ಸಲ್ ವಾದ ಘೋಷಣೆ ಕೂಗುತ್ತಾ ಪೊಲೀಸ್ ಜೀಪು ಏರಿದ ದೃಶ್ಯಾವಳಿ ಕಂಡು ಅಲ್ಲಿದ್ದ ನಾಗರಿಕರು ಬೆರಗಾದರು.
ಮಲೆನಾಡು ಕರಾವಳಿಯಿಂದ ನಕ್ಸಲ್ ನಿಗ್ರಹ ದಳ ಪಡೆಯನ್ನು ಹಿಂಪಡೆಯಬೇಕು. ಅರಣ್ಯವಾಸಿಗಳಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಬಂಡವಾಳಶಾಹಿತ್ವ ಬಹಿಷ್ಕರಿಸೋಣ, ನಕ್ಸಲ್ ವಾದ ಚಿರಾಯುವಾಗಲಿ. ಇಂಕಿಲಾಬ್ ಜಿಂದಾಬಾದ್, ನಕ್ಸಲ್ ವಾದ ಜಿಂದಾಬಾಬ್ ಮುಂತಾದ ಘೋಷಣೆಯನ್ನು ಕೂಗಿ ತಾನೊಬ್ಬ ಅಚ್ಚ ನಕ್ಸಲ್ ವಾದಿ ಎಂಬುವುದನ್ನು ವೀರಮಣಿ ತೋರ್ಪಡಿಸಿದ್ದಾನೆ.