ಬಂಟ್ವಾಳ: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಹನೀಫ್ ಯಾನೆ ಮಾದ ಹನೀಫ್ (38) ದುಷ್ಕರ್ಮಿಗಳಿಂದ ಇರಿತಕ್ಕೆ ಒಳಗಾದವನಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಡುಗಲೇ ಈ ಘಟನೆ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಬಿಗು ಬಂದೋಬಸ್ತ್ ಒದಗಿಸಲಾಗಿದೆ.
ಹನೀಫ್ ಯಾನೆ ಮಾದ ಹನೀಫ್ ಮಾರಿಪಳ್ಳದ ಅಂಗಡಿಯೊಂದರ ಮುಂದೆ ನಿಂತಿದ್ದ ಸಂದರ್ಭದಲ್ಲಿ ಕಾರು ಹಾಗೂ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಈ ಕೃತ್ಯ ವೆಸಗಿ ಪರಾರಿಯಾಗಿದೆ. ಗಾಯಗೊಂಡ ಹನೀಫ್ ನನ್ನು ಸ್ಥಳೀಯರೇ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹನೀಫ್ ಒಂದು ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಹೆಸರು ರೌಡಿ ಶೀಟ್ ನಲ್ಲಿಯೂ ದಾಖಲಾಗಿತ್ತು. ಸ್ಥಳದಲ್ಲಿ ರಕ್ತ ಚೆಲ್ಲಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಜಮಾಯಿಸಿದ್ದ ಜನರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬಂಟ್ವಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ, ಠಾಣಾಧಿಕಾರಿ ರಕ್ಷಿತ್ ಗೌಡ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.