ಕಾಸರಗೋಡು: ಕಬಡ್ಡಿ ಆಟಗಾರ ನೀಲೇಶ್ವರದ ಸಂತೋಷ್ ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದೆ. ಈತನ ಚಿಕ್ಕಮ್ಮನ ಮಗನೇ ಈ ಕೃತ್ಯ ನಡೆಸಿದ್ದು, ಈತನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾರ್ಯಾ೦ಗೋಡು ಚೆಟ್ಟಿಕಾನದ ಮನೋಜ್ (38) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧ ಕೊಲೆಗೆ ಕಾರಣ ಎನ್ನಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿದ್ದರೂ ಮರಣೋತ್ತರ ಪರೀಕ್ಷೆಯಿಂದ ಇದು ಕೊಲೆ ಎಂಬ ಸಂಶಯ ಉಂಟಾಗಿತ್ತು. ಕೊನೆಗೆ ಪೊಲೀಸರು ಕೂಲಂಕುಷವಾಗಿ ನಡೆಸಿದ ತನಿಖೆಯಿಂದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಕೃತ್ಯ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಡಿಸೆಂಬರ್ 7ರಂದು ಸಂತೋಷ್ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಮನೆಯವರು ಶಂಕಿಸಿದ್ದರು. ಆದರೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಉಸಿರು ಗಟ್ಟಿ ಮೃತಪಟ್ಟಿರುವುದಾಗಿ ಸ್ಪಷ್ಟಗೊಂಡಿತ್ತು. ಇದರಂತೆ ಆಸ್ಪತ್ರೆಯ ಪೊಲೀಸ್ ಸರ್ಜನ್ ಗೋಪಾಲಕೃಷ್ಣ ಪಿಳ್ಳೆ ಮನೆಗೆ ಭೇಟಿ ನೀಡಿ ಮೃತದೇಹ ಪತ್ತೆಯಾದ ಕೊಠಡಿಯಿಂದ ಮಾಹಿತಿ ಕಲೆ ಹಾಕಿ ನೀಲೇಶ್ವರ ಪೊಲೀಸರಿಗೆ ವರದಿಯನ್ನು ನೀಡಿದ್ದರು. ಘಟನೆ ನಡೆದ ದಿನ ಸಂತೋಷ್ ಮಾತ್ರ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮನೋಜ್ ಕೃತ್ಯ ನಡೆಸಿದ್ದಾನೆ.
ಮನೋಜ್ ವಿವಾಹಿತನಾಗಿದ್ದರೂ ಪತ್ನಿಗೆ ವಿಚ್ಚೇಧನೆ ನೀಡಿದ್ದನು. ಈತ ಸಂತೋಷ್ ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾಗಿದೆ. ಕೊಲೆಯ ಹಿಂದಿನ ದಿನ ಪಾನಮತ್ತನಾಗಿ ಮನೆಗೆ ಬಂದಿದ್ದ ಸಂತೋಷ್ ತಾಯಿ ಮೇಲೆ ಹಲ್ಲೆ ನಡೆಸಿದ್ದನು. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂತೋಷ್ ನ ಪತ್ನಿ ಕೂಡಾ ತಾಯಿ ಜೊತೆ ಆಸ್ಪತ್ರೆಯಲ್ಲಿ ನಿಂತಿದ್ದರು. ಡಿ.7 ರಂದು ರಾತ್ರಿ ಸಂತೋಷ್ ಮತ್ತು ಆತನ ಸ್ನೇಹಿತ ಮನೆಯಲ್ಲಿ ಮದ್ಯಸೇವಿಸುತ್ತಿರುವುದನ್ನು ಮನೋಜ್ ಗಮನಿಸಿದ್ದನು. ಸ್ನೇಹಿತ ತೆರಳಿದ ಕೂಡಲೇ ಬೈಕ್ ನಲ್ಲಿ ಬಂದ ಈತ ಪಾನಮತ್ತನಾಗಿ ಬಿದ್ದಿದ್ದ ಸಂತೋಷ್ ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಹಗ್ಗವನ್ನು ಈತನೇ ತಂದಿದ್ದು, ಕೃತ್ಯದ ಬಳಿಕ ಇದನ್ನು ಕೊಂಡೊಯ್ದಿದ್ದಾನೆ.
ಮರುದಿನ ಮನೆಯವರು ಬಂದಾಗ ಮೃತಪಟ್ಟ ಸ್ಥಿತಿಯಲ್ಲಿ ಸಂತೋಷ್ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಯಾವುದೇ ಸಂಶಯ ಬರದಂತೆ ಈತ ಮರುದಿನ ನಡೆದ ಸಂತೋಷನ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದಾನೆ. ಪೊಲೀಸರು ಈತನ ಮನೆಗೆ ತಲುಪುವ ಸ್ನೇಹಿತರ ಬಗ್ಗೆ ಮಾಹಿತಿ ಕಲೆ ಹಾಕಿ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸಾಂದರ್ಭಿಕ ಸಾಕ್ಷಗಳನ್ನು ಕಲೆ ಹಾಕಲಾಗಿತ್ತು. ಕೊನೆಗೆ ಸಂಶಯದ ಮೇರೆಗೆ ಮನೋಜ್ ನನ್ನು ವಶಕ್ಕೆ ತೆಗೆದು ಪೊಲೀಸರು ವಿಚಾರಣೆ ನಡೆಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂತು. ನಡೆದ ಘಟನೆ ಬಗ್ಗೆ ಮನೋಜ್ ಬಾಯ್ಬಿಟ್ಟನು. ಕೃತ್ಯಕ್ಕೆ ಸಂತೋಷ್ ನ ಪತ್ನಿಯ ಪ್ರೇರಣೆ ಲಭಿಸಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.