ಕಾಸರಗೋಡು: ಕಾಸರಗೋಡು ವೈದ್ಯಕೀಯ ಕಾಲೇಜು ವಿಳಂಬವನ್ನು ಪ್ರತಿಭಟಿಸಿ ಹೋರಾಟ ತೀವ್ರಗೊಳಿಸಲು ಜನಪರ ಮುಷ್ಕರ ಸಮಿತಿ ಮುಂದಾಗಿದೆ.
ಎರಡು ವರ್ಷಗಳ ಹಿಂದೆ ಬದಿಯಡ್ಕ ಸಮೀಪದ ಉಕ್ಕಿನಡ್ಕದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯವರು ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು. ನವಂಬರ್ 30ಕ್ಕೆ ಎರಡು ವರ್ಷಗಳು ಸಂದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ. ರಾಜ್ಯದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಅಧಿಕಾರಕ್ಕೆ ಬರುತ್ತಿರುವ ಸರಕಾರಗಳ ನಿರ್ಲಕ್ಷಕ್ಕೆ ಇದು ಉದಾಹರಣೆ ಎಂದು ಮುಷ್ಕರ ಸಮಿತಿ ಆರೋಪಿಸಿದೆ. ಹೊರ ರಾಜ್ಯದ ಕೆಲ ಲಾಬಿಗಳು ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ಆರಂಭಿಸದಂತೆ ಕೆಲಸ ಮಾಡುತ್ತಿದೆ. ಕಾಸರಗೋಡಿನ ಜೊತೆಗೆ ಉಳಿದ ಜಿಲ್ಲೆಗಳಲ್ಲಿ ಶಿಲಾನ್ಯಾಸ ಮಾಡಿದ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಕಾಸರಗೋಡು ಜಿಲ್ಲೆಯ ಬಗ್ಗೆ ನಿರ್ಲಕ್ಷ ವಹಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲು ಸಮಿತಿ ಮುಂದಾಗಿದೆ. ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡುವ ದಿನ ಜಿಲ್ಲೆಯಲ್ಲಿ ಬಂದ್ ನಡೆಸಲು ಡಿಸೆಂಬರ್ 14ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನಾ ಮುಷ್ಕರ ನಡೆಸಲು ಸಮಿತಿ ತೀರ್ಮಾನಿಸಿದೆ. ಇದರಂಗವಾಗಿ ಇಂದು ಕಾಸರಗೋಡು ನಿಲ್ದಾಣ ಪರಿಸರದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.