ಕಾರ್ಕಳ: ನಕ್ಸಲ್ ಪೀಡಿತ ಪ್ರದೇಶವಾಗಿರುವ ಈದು ನೂರಾಲ್ಬೆಟ್ಟು ಕನ್ಯಾಲು ಪ್ರದೇಶಕ್ಕೆ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನೀಲ್ ಕುಮಾರ್ ಖುದ್ದಾಗಿ ಭೇಟಿ ನೀಡಿ ನಾಗರಿಕರ ಸಮಸ್ಯೆಗೆ ಸ್ವಂದಿಸುವ ಬಗ್ಗೆ ಭರವಸೆ ನೀಡಿದರು.
ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಿರುವ ಕನ್ಯಾಲು ಪರಿಸರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 15 ಕುಟುಂಬಗಳು ನೆಲೆಸಿದ್ದು ಅವರಲ್ಲಿ ನಾಲ್ಕು ಕುಟುಂಬಗಳು ಪುನರ್ವಸತಿ ಯೋಜನೆಯಡಿ ಅಲ್ಲಿಂದ ಸ್ಥಳಾಂತರಗೊಂಡಿದ್ದರು. ಅಲ್ಲಿರುವ ನಾಗರಿಕರ ಅಗತ್ಯತೆಗೆ ಸೌಕರ್ಯ ನೀಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ಎಂಬ ಕಾರಣವಾಗಿದೆ. ಭಾರೀ ಎತ್ತರ-ಇಳಿಜಾರು, ತಿರುವು-ಮುರುವಿನಿಂದ ಕೂಡಿದ ಮಣ್ಣು-ಕಂದಕ-ಕಲ್ಲುಬಂಡೆಯೊಳಗೊಂಡಿರುವ ರಸ್ತೆಯಲ್ಲಿ ಸುಮಾರು ನಾಲ್ಕು ಕಿ.ಮೀ ಕ್ರಮಿಸಬೇಕಾಗುತ್ತದೆ. ವಿದ್ಯುತ್ ಸಂಪರ್ಕ, ಸುವ್ಯವಸ್ಥಿತ ರಸ್ತೆ, ಕಾಲು ಸೇತುವೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಜೀವನ ಸಾಗಿಸುವ ದುರ್ಗತಿ ಎದುರಾಗಿದೆ.
ಸರಕಾರಗಳು ಬದಲಾಗಿದೆ. ಜನಪ್ರತಿಗಳು ಬದಲಾಗುತ್ತಾ ಬಂದಿದ್ದರೂ ಇಲ್ಲಿನ ನಾಗರಿಕರ ಸ್ಥಿತಿ-ಗತಿ ಇಂದಿಗೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರವಾನಿಗೆ ಕೋವಿಗಳು ಪ್ರತಿಯೊಂದು ಮನೆಯಲ್ಲಿ ಇದ್ದವಾದರೂ ಕಳೆದ ಕೆಲ ವರ್ಷಗಳ ಹಿಂದೆ ಸರಕಾರ ಅದನ್ನು ಕಸಿದುಕೊಂಡಿದೆ. ಈ ಎಲ್ಲಾ ಸಮಸ್ಸೆಗೆ ಶಾಶ್ವತವಾಗಿ ಪರಿಹಾರ ದೊರಕಬೇಕೆಂಬ ಉದ್ದೇಶ ಮುಂದಿಟ್ಟುಕೊಂಡು ಮಲೆಕುಡಿಯ ಜನಾಂಗದ ಮುಖಂಡ ಶ್ರೀಧರ್ ಮಲೆಕುಡಿಯ ನೇತೃತ್ವದಲ್ಲಿ ಇತ್ತೀಚೆಗೆ ಶಾಸಕರನ್ನು ಭೇಟಿ ನೀಡಿ ಮನವಿ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಶನಿವಾರದಂದು ಶಾಸಕ ವಿ.ಸುನೀಲ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ಜಯವರ್ಮ ಜೈನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಗೌಡ, ಮಲೆಕುಡಿಯ ಸಂಘದ ಮುಖಂಡ ಶ್ರೀಧರ್ ಗೌಡ, ಈದು ಗ್ರಾಮ ಪಂಚಾಯತ್ ಸದಸ್ಸೆ ಶೋಭಾ ಮೊದಲಾದವರು ನೂರಾಲ್ಬೆಟ್ಟು ಕನ್ಯಾಲುವಿನ ಡೀಕಯ್ಯ ಗೌಡರ ಮನೆಗೆ ಭೇಟಿ ನೀಡಿ ಸುಮಾರು ಒಂದುವರೆ ಗಂಟಗಳ ಕಾಲ ವಿಚಾರ ವಿನಿಮಯ ನಡೆಸಿ ಅಗತ್ಯ ಮೂಲಭೂತ ಸೌಕರ್ಯದ ಬಗ್ಗೆ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.