ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ನಕಲಿ ಅಧಿಕಾರಿಯನ್ನು ರೈಲ್ವೆ ಭದ್ರತಾ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಕಣ್ಣೂರಿನ ಪಿ.ಪಿ ನಿಯಾಜ್ (25) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕೊಯಮುತ್ತೂರಿಗೆ ತೆರಳುತ್ತಿದ್ದ ಇಂಟರ್ ಸಿಟಿ ರೈಲಿನಲ್ಲಿ ಈತ ಪ್ರಯಾಣಿಕರ ಟಿಕೆಟ್ ಗಳನ್ನು ತಪಾಸಣೆ ನಡೆಸುತ್ತಿದ್ದನು. ಮಂಗಳೂರಿನಿಂದಲೇ ಈತ ತಪಾಸಣೆ ನಡೆಸುತ್ತಿದ್ದು, ಟಿಕೆಟ್ ಇಲ್ಲದ ಕೆಲ ಪ್ರಯಾಣಿಕರಿಂದ ಈತ ಹಣ ಪಡೆದಿದ್ದನೆನ್ನಲಾಗಿದೆ. ಈತನ ಬಗ್ಗೆ ಸಂಶಯಗೊಂಡ ರೈಲ್ವೆ ಭದ್ರತಾ ಸಿಬಂದಿಗಳು ಪ್ರಶ್ನಿಸಿದಾಗ ತಬ್ಬಿಬ್ಬಾಗಿದ್ದು, ಬಳಿಕ ಈತನನ್ನು ಬಂಧಿಸಿ ಕಾಸರಗೋಡು ರೈಲ್ವೆ ಪೊಲೀಸರಿಗೆ ಒಪ್ಪಿಸಿದರು . ಈತನನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ .