ಕಾಸರಗೋಡು: ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಬಿಜೆಪಿಯ ಗುರಿಯಾಗಿದ್ದು ಮುಂದಿನ ಐದು ವರ್ಷದೊಳಗೆ ಎಲ್ಲರಿಗೂ ವಸತಿ ಎಂಬ ಯೋಜನೆ ಹೊಂದಿದ್ದು, 2020ರೊಳಗೆ ವಸತಿ ರಹಿತರು ಈ ದೇಶದಲ್ಲಿ ಇರಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು.
ಅವರು ಬುಧವಾರ ಉಪ್ಪಳದಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಂ ರತ್ನಾಕರನ್ ನೇತ್ರತ್ವದ ವಿಮೋಚನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಭ್ರಷ್ಟಾಚಾರ ರಹಿತ ಪಾರದರ್ಶಕತೆಯ ಆಡಳಿತವನ್ನು ನೀಡುತ್ತಿರುವ ಮೋದಿ ಸರಕಾರ ಕಳೆದ 18 ತಿಂಗಳಲ್ಲಿ ಇಡೀ ಜಗತ್ತು ಭಾರತವನ್ನು ನೋಡುವಂತೆ ಮಾಡಿದೆ. ವಿದೇಶ ಪ್ರಸಿದ್ಧ ಪತ್ರಿಕೆಗಳು, ವಿಶ್ವಬ್ಯಾಂಕ್ಗಳ ಸಹಿತ ಅನೇಕ ಸಂಸ್ಥೆಗಳ ವರದಿಯಂತೆ ಅತ್ಯಂತ ತ್ವರಿತಗತಿಯಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ವರದಿಯನ್ನು ನೀಡುತ್ತಿರುವುದು ಮೋದಿ ಆಡಳಿತವನ್ನು ಸಾರಿ ಹೇಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇರಳದಲ್ಲಿ ಇಲ್ಲಿಯವರೆಗಿನ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಸರಕಾರ ಮುಷ್ಟಿಯಲ್ಲಿರುವ ಜನತೆ ಅವುಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದೆ. ಇನ್ನೂ ಅಭಿವೃದ್ಧಿಯನ್ನು ಕಾಣುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಮಾಜಿ ಓ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿ ವಹಿಸಿದ್ದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ಪಿ.ಸಿ.ಥೋಮಸ್, ಸಂಸದ ರಿಚರ್ಡ್ ಹೇ, ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು, ಶ್ರೀರಾಮ್ ಕೊಯ್ಯೋಲು, ನ್ಯಾಯವಾದಿ ಶ್ರೀಧರನ್ ಪಿಳ್ಳೆ, ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್, ಮಾಜಿ ಜಿಲ್ಲಾಧ್ಯಕ್ಷ ಸುರೇಶ್ಕುಮಾರ್ ಶೆಟ್ಟಿ ಪೂಕಟ್ಟೆ, ಮಾಜಿ ಕಬಡ್ಡಿ ಪಟು ಭಾಸ್ಕರ್ ರೈ, ಪಿ.ಕೆ.ಪದ್ಮನಾಭನ್, ಎಂಡೋ ಹೋರಾಟಗಾರ್ತಿ ಲೀಲಾಕುಮಾರಿ ಅಮ್ಮ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ ನಟ ಸುರೇಶ್ಗೋಪಿ ಅವರು ವಿಮೋಚನಾ ಪ್ರತಿಜ್ಞೆ ಬೊಧಿಸಿದರು. ರಾಜ್ಯದ 140 ವಿಧಾನ ಸಭಾ ಕ್ಷೇತ್ರಗಳಲಿ ಯಾತ್ರೆ ಸಂಚರಿಸಿ ಫೆಬ್ರವರಿ 10 ರಂದು ತಿರುವನಂತಪುರದ ದಲ್ಲಿ ಸಮಾರೋಪಗೊಳ್ಳಲಿದೆ.