ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೆ.ಜಿಯಿಂದ ಪಿಜಿವರೆಗಿನ ವಿದ್ಯಾರ್ಥಿಗಳು, ಬೋಧಕ, ಬೋಧಕೇತರರು, ಸಿಬಂದಿಗಳು, ವಿಶೇಷ ಆಹ್ವಾನಿತರು , ವಿವಿಧ ಕಾಲೇಜುಗಳ 600 ಎನ್ಸಿಸಿ ಕೆಡೆಟ್ ಗಳು ಹೀಗೆ ಸುಮಾರು 25 ಸಾವಿರ ಮಂದಿ ಏಕಕಾಲದಲ್ಲಿ ಒಂದೆಡೆ ಸೇರಿ ಪುತ್ತಿಗೆಪದವಿನ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವಿಶಾಲವಾದ ಬಯಲು ರಂಗ ಮಂದಿರದಲ್ಲಿ ವಿಶೇಷ ರೀತಿಯಲ್ಲಿ 67ನೇ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ರಾಷ್ಟ್ರ ನಮನ ಸಲ್ಲಿಸಿ ಗಮನ ಸೆಳೆದರು.
ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವನ್ನು ಸ್ವಾತಂತ್ರ್ಯಗೊಳಿಸಿ, ಪ್ರಜ್ಞಾಪ್ರಭುತ್ವ, ಗಣರಾಜ್ಯ ರಾಷ್ಟ್ರವಾಗಿಸುವಲ್ಲಿ ಹಲವು ದೇಶಭಕ್ತರ, ನಾಯಕರ ಕೊಡುಗೆ, ಬಲಿದಾನವಿದೆ. ಭಾರತದ ಘನತೆ, ಗೌರವವನ್ನು ಉಳಿಸಿ, ಬೆಳೆಸುವಲ್ಲಿ ಯುವಜನತೆಗೆ ಮಹತ್ವದ ಜವಾಬ್ದಾರಿ ಇದೆ. ಯುವಶಕ್ತಿಯಿಂದ ದೇಶವನ್ನು ಸಶಕ್ತಗೊಳಿಸಲು ಸಾಧ್ಯವಿದೆ. ಎಲ್ಲಾ ರಾಜಕೀಯ ವ್ಯವಸ್ಥೆಗಳನ್ನು ಹೋಲಿಕೆ ಮಾಡಿ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಶ್ರೇಷ್ಠವಾದುದು. ಅಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಂದು ಸಂವಿಧಾನದ ರೂಪದಲ್ಲಿ ನಾವು ಸ್ವೀಕರಿಸಿದರ ಸುದಿನವಾಗಿದೆ. ನಮ್ಮ ದೇಶದ ಪ್ರಗತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕಾರಣ. ಇಂತಹ ವ್ಯವಸ್ಥೆಯನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ. ಈ ಜವಾಬ್ದಾರಿಯ ನಿರ್ವಹಣೆ ಯುವಜನಾಂಗದ ಕರ್ತವ್ಯ ಎಂದವರು ಹೇಳಿದರು.
ಪುತ್ತಿಗೆಯ ವಿಶಾಲ ಬಯಲು ರಂಗಮಂದಿರ ಈ ಬಾರಿಯ ಆಚರಣೆಯ ವಿಶೇಷ ಆಕರ್ಷಣೆ. ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಸುಮಾರು 600 ಎನ್ಸಿಸಿ ಕೆಡೆಟ್ ಗಳು ಹಾಗೂ ಆರ್ಮಿಯ ಲೆಫ್ಟಿನೆಂಟ್ ಅಧಿಕಾರಿಗಳು, ಸ್ಕೌಟ್ಸ್ ಹಾಗೂ ಗೈಡ್ಸ್ ಕಾರ್ಯಕ್ರಮದ ಶಿಸ್ತು ಹೆಚ್ಚುವಂತೆ ಮಾಡಿದ್ದರು. ಇನ್ನು `ಕೋಟಿ ಕಂಠೋ ಸೆ….’ ಎಂಬ ರಾಷ್ಟ್ರೀಯ ಭಾವೈಕ್ಯತೆಯ ಗೀತೆಗೆ ನೆರೆದ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ರಾಷ್ಟ್ರಧ್ವಜ ಬೀಸಿದ ಸಂದರ್ಭ ರಂಗೇರಿಸಿತು. ಬಯಲು ರಂಗಮಂದಿರದಲ್ಲಿ 3000 ವಿದ್ಯಾರ್ಥಿಗಳಿಂದ ನಿರ್ಮಿತವಾದ ಅಶೋಕ ಚಕ್ರ ಆಕರ್ಷಣೆಯ ಕೇಂದ್ರವಾಗಿತ್ತು. ಕಾರ್ಯಕ್ರಮದ ನಡುವೆ ಆಗನಸಕ್ಕೆ ತೇಲಿ ಬಿಟ್ಟ ತ್ರಿವರ್ಣಗಳಲ್ಲಿದ್ದ ಬಲೂನುಗಳು ಹಾಗೂ 2000 ವಿದ್ಯಾರ್ಥಿಗಳು ತ್ರಿವರ್ಣ ವಸ್ತ್ರಧಾರಿ ವಿದ್ಯಾರ್ಥಿಗಳು ಆಚರಣೆಯ ಅಂದವನ್ನು ಹೆಚ್ಚಿಸಿದ್ದರು.
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ನಡೆದ ಅಂತರ್ ಕಾಲೇಜು ಡ್ರಿಲ್ ಸ್ಪರ್ಧೆ ನಡೆಯಿತು. ಎನ್ಸಿಸಿಯ ವಿವಿಧ ಗ್ರೂಪ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.