ಬಂಟ್ವಾಳ : ಪುದುಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಜುಮಾದಿಗುಡ್ಡೆಗೆ ಹೋಗುವ ದಾರಿಯನ್ನು ಸರಿ ಮಾಡಿ ಕೊಡದ ಕಾರಣ ಫೆ. 20ರಂದು ನಡೆಯುವ ತಾಪಂ, ಜಿಪಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಲ್ಲಿನ ನಾಗರಿಕರು ಫ್ಲೆಕ್ಸ್ ಅಳವಡಿಸಿದ್ದಾರೆ.
ಫರಂಗಿಪೇಟೆ ಹಳೆ ರಸ್ತೆಗೆ ತಾಗಿ ಕೊಂಡಿರುವ ಜುಮಾದಿಗುಡ್ಡೆಗೆ ಹೋಗುವ ಕಾಲು ದಾರಿಯು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಇಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದೆ. ಅಲ್ಲದೆ ಕಳೆದ ವರ್ಷ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಖಾಸಗಿ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದ್ದಾಗ ಮಾಲಕ, ಪಂಚಾಯತ್ ಆಡಳಿತದ ನಿರ್ಲಕ್ಷದಿಂದಾಗಿ ಗುಡ್ಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಗುಡ್ಡ ಕುಸಿತದಿಂದಾಗಿ ಸುಮಾರು 9 ಮನೆಗಳಿಗೆ ತೆರಳುವ ದಾರಿಯು ಸಂಪೂರ್ಣವಾಗಿ ಕಡಿತಗೊಂಡಿದೆ.ಈ ದಾರಿಗಳನ್ನು ಸರಿಮಾಡಿಕೊಡುವಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರ್ಯಾರೂ ಮನವಿಗೆ ಸ್ಪಂದಿಸದ ಕಾರಣ ತಾಪಂ, ಜಿಪಂ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದು, ಯಾವುದೇ ಪಕ್ಷದವರು ಮತ ಯಾಚಣೆಗೆ ಇಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಜುಮಾದಿಗುಡ್ಡೆ ನಾಗರಿಕರು ತಿಳಿಸಿದ್ದಾರೆ.
ನಿಲ್ಲದ ಕಪ್ಪು ಕಲ್ಲಿನ ಗಣಿಗಾರಿಕೆ: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಮಾಡತ್ತಡ್ಕ-ಅಜ್ಜಿನಡ್ಕ ಸಂಪರ್ಕ ರಸ್ತೆ ಸುಮಾರು ಎಂಟು ವರ್ಷಗಳಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಕಪ್ಪು ಕಲ್ಲಿನ ಗಣಿಗಾರಿಕೆಯ ಟಿಪ್ಪರ್ ಲಾರಿಗಳ ಸಂಚಾರದಿಂದಾಗಿ ಎಕ್ಕುಟ್ಟಿ ಹೋಗಿದ್ದರೂ ಜನಪ್ರತಿನಿಧಿಗಳು ಕಣ್ಣೆತ್ತಿಯೂ ನೋಡಿಲ್ಲದ ಕಾರಣ ಇಲ್ಲಿನ ಜನ ಮುಂದಿನ ಜಿ.ಪಂ ಮತ್ತು ತಾ.ಪಂ.ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ವಿಟ್ಲದಿಂದ ಚಂದಳಿಕೆ-ಮಾಡತ್ತಡ್ಕ ಮೂಲಕ ಪುಣಚ ಗ್ರಾಮದ ಅಜ್ಜಿನಡ್ಕ ತಲುಪುವ ಸಂಪರ್ಕ ರಸ್ತೆ ಏಳೆಂಟು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿದೆ. ಈ ಭಾಗದ ಜನ ಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ವಾಹನಗಳಲ್ಲಿ ಬಿಡಿ ನಡೆದಾಡಲೂ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ರಸ್ತೆ ಇಷ್ಟೊಂದು ಹೀನ ಸ್ಥಿತಿಗೆ ತಲುಪಲು ಈ ಪ್ರದೇಶದಲ್ಲಿ ನಡೆಯುತ್ತಿರುವ ಹತ್ತಕ್ಕೂ ಹೆಚ್ಚು ಕಪ್ಪುಕಲ್ಲಿನ ಕೋರೆಗಳೇ ಕಾರಣವೆಂಬುದು ಹಗಲಿನಷ್ಟೇ ಸತ್ಯವಾಗಿದೆ. ಸರಕಾರದ ಮತ್ತು ಸಂಬಂಧಿಸಿದ ಇಲಾಖೆಗಳ ಕಾನೂನನ್ನು ಗಾಳಿಗೆ ತೂರುತ್ತಿರುವ ಗಣಿ ಮಾಲಿಕರು ರಾಜಾರೋಷವಾಗಿ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಅದೆಷ್ಟೊ ಬಾರಿ ಸಾರ್ವಜನಿಕರು ದೂರು ನೀಡಿದ್ದರು.
ಗ್ರಾಮ ಪಂಚಾಯತು, ಜಿಲ್ಲಾ ಪಂಚಾಯತು, ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸೆರಿದಂತೆ ಎಲ್ಲಿಲ್ಲಿಗೆ ದೂರು ನೀಡಬೇಕೋ ಅಲ್ಲೆಲ್ಲಾ ದೂರು ನೀಡಿದ್ದಾಯಿತು, ಆದರೆ ಜನಸಮಾನ್ಯರ ದೂರಿಗೆ ಈವರೆಗೂ ಅಧಿಕಾರಿಗಳು ಮತ್ತು ಇಲ್ಲಿನ ಜನಪ್ರತಿನಿಧಿಗಳು ಎಳ್ಳಷ್ಟೂ ಬೆಲೆ ನೀಡುತ್ತಿಲ್ಲವೆಂಬ ನೋವು ಸಾರ್ವಜನಿಕರದ್ದಾಗಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗೊಡ್ಡು ಭರವಸೆಗಳಿಂದ ಹೈರಾಣರಾಗಿರುವ ಇಲ್ಲಿನ ಜನ ಈ ಬಾರಿಯ ಜಿ.ಪಂ. ಮತ್ತು ತಾ.ಪಂ.ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದು ಬ್ಯಾನರ್ ಹಾಕಿದ್ದಾರೆ.