ಮಂಗಳೂರು: ಒಂದು ಲಕ್ಷಕ್ಕೂ ಅಧಿಕ ತೆರಿಗೆಯನ್ನು ಪಾವತಿಸದ ತೊಕ್ಕೊಟ್ಟು ನಗರಸಭೆ ಕಟ್ಟಡದಲ್ಲಿರುವ ಆರು ಅಂಗಡಿಗಳಿಗೆ ನಗರಸಭೆ ಪೌರಾಯುಕ್ತೆ ಹಾಗೂ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಜಡಿದ ಪ್ರಸಂಗ ಸೋಮವಾರ ನಡೆಯಿತು.
ತೊಕ್ಕೊಟ್ಟು ನಗರಸಭೆ ಕಟ್ಟಡದಲ್ಲಿರುವ ಅಂಗಡಿ ಸಂಖ್ಯೆ 7,26,30,38, 40, 48 ದಾಳಿ ನಡೆಸಿ ಮುಚ್ಚಿಸಿ ನಗರಸಭೆಯ ಬೀಗ ಹಾಕಲಾಯಿತು. ಅಂಗಡಿಗಳ ಮಾಲೀಕರಾದ ರಾಜೇಶ್ ಸಾಲ್ಯಾನ್ ಕೋಡಿಕಲ್ -1,14,830, ಹಸನ್ ಶಾಫಿ – 1,59,400, ಪೃಥ್ವಿರಾಜ್ ಸಾಲಿಯಾನ್ -2,12,520, ಹಂಝ ಇಂತಿಯಾಝ್ -2,24,380, ಮಹಮ್ಮದ್ ಹನೀಫ್ 2,83,200 ಹಾಗೂ ಮಹಮ್ಮದ್ ಝೀನತ್ ಕಾಮ್ -2,17,540 ರೂ. ತೆರಿಗೆ ಹಣವನ್ನು ಬಾಕಿಯಿರಿಸಿದ್ದರು. ಈ ಬಗ್ಗೆ ಆರು ತಿಂಗಳಿನಿಂದ ನಗರಸಭೆಯಿಂದ ನೋಟೀಸುಗಳನ್ನು ನೀಡುತ್ತಾ ಬಂದರೂ, ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ತೆರಿಗೆಯನ್ನು ಪಾವತಿಸಿರಲಿಲ್ಲ. ಅದಕ್ಕಾಗಿ ಪೌರಾಯುಕ್ತ ನೇತೃತ್ವದಲ್ಲಿ ದಾಳಿ ನಡೆಸಿ ಮುಚ್ಚಿಸಲಾಗಿದೆ.
ನಗರಸಭೆ ಕಟ್ಟಡದಲ್ಲಿ ಸುಮಾರು 48 ಅಂಗಡಿಗಳಿವೆ. ಅದರಲ್ಲಿ ಹಲವು ಅಂಗಡಿ ಮಾಲೀಕರು ನಗರಸಭೆಗೆ ಒಟ್ಟು 18 ಲಕ್ಷ ಹಣ ಬಾಕಿಯಿರಿಸಿದ್ದಾರೆ. ಅವರಿಗೆ ಹಲವು ಬಾರಿ ಕಾರ್ಯಾಚರಣೆ ನಡೆಸಿ ನೋಟೀಸು ನೀಡಿದರೂ ಯಾವುದೇ ಪ್ರತಿಸ್ಪಂಧನೆ ಮಾಡದೇ ಬಾಕಿ ಮೊತ್ತವನ್ನು ಪಾವತಿಸಿಲ್ಲ. ಅದಕ್ಕಾಗಿ ಇಂದು ಅಂಗಡಿ ಮಾಲೀಕರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ಅಂಗಡಿಗಳಿಂದ ತಿಂಗಳಿಗೆ ರೂ. 2,250, 3,000, 4000 ಬಾಡಿಗೆಯಂತೆ ಹಣ ಪಾವತಿಯಾಗಬೇಕು. ಅದು ಪಾವತಿಯಾಗದಿರುವುದರಿಂದ ಉಳ್ಳಾಲ ನಗರಸಭೆಯ ಅಭಿವೃದ್ಧಿಗೆ ಕುಂಠಿತವಾಗಿದೆ. ಈ ಉದ್ದೇಶವನ್ನು ಇಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ತಿಳಿಸಿದರು.
ನಗರಸಭೆಯಿಂದ ಅಂಗಡಿ ಪಡಕೊಂಡವರು ಒಳಬಾಡಿಗೆಯಾಗಿ ಅಂಗಡಿಯನ್ನು ನೀಡಿದ್ದಾರೆ. ಮುಸ್ತಾಫ ಎಂಬವರ ಪತ್ನಿ ಝೀನತ್ ಎಂಬವರ ಅಂಗಡಿಯನ್ನು ಬಾಡಿಗೆಯಾಗಿ ಪಡೆದುಕೊಂಡು ಅವರಿಗೆ ತಿಂಗಳಲ್ಲಿ ಸರಿಯಾಗಿ ರೂ.10,000 ಬಾಡಿಗೆ ನೀಡುತ್ತಿದ್ದೇನೆ. ಡೆಪಾಸಿಟ್ ಆಗಿ ರೂ. 2ಲಕ್ಷ ಹಣವನ್ನು ಪಾವತಿಸಿದ್ದೇನೆ. ಆದರೆ ಇದೀಗ ಏಕಾಏಕಿ ಅಂಗಡಿಯನ್ನು ಮುಚ್ಚುವುದರಿಂದ ಲಕ್ಷಾಂತರ ನಷ್ಟ ಅನುಭವಿಸಲಿದ್ದೇನೆ ಎಂದು ಅಂಗಡಿ ಬಾಡಿಗೆಗೆ ಪಡೆದುಕೊಂಡ ರಾಜೇಶ್ ಹೇಳಿದರು.