ಬಂಟ್ವಾಳ: ಗುರುಪುರ ಕಿನ್ನಿಕಂಬಳ ಬಳಿ ಭಾನುವಾರ ಅಪರಾಹ್ನ ನಡೆದ ಬೈಕ್ ಅಪಘಾತವೊಂದರಲ್ಲಿ ಬಂಟ್ವಾಳ ಭಂಡಾರಿಬೆಟ್ಟು ನಿವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಲ್ಲಿನ ನಿವಾಸಿ ಪುರಂದರ ಆಚಾರ್ಯ ಎಂಬವರ ಪತ್ನಿ ಹೇಮಾಪುರಂದರ ಆಚಾರ್ಯ(43) ಮೃತ ಮಹಿಳೆ. ಅಡ್ಡೂರು ಸಮೀಪ ಸಂಬಂಧಿಕರೊಬ್ಬರ ಉತ್ತರ ಕ್ರಿಯೆಗೆಂದು ತೆರಳಿದ್ದ ವೇಳೆ ಈ ಅವಘಡ ನಡೆದಿದೆ. ಪತಿ, ಪತ್ನಿ ಇಬ್ಬರೂ ಬೈಕಿನಲ್ಲಿ ಸಂಚರಿಸುತ್ತಿದ್ದು ಕಿನ್ನಿಕಂಬಳ ಬಳಿ ತಲುಪುತ್ತಿದ್ದಂತೆಯೇ ಇವರ ಮುಂದೆ ತೆರಳುತ್ತಿದ್ದ ಬಸ್ಸುಏಕಾಏಕಿ ನಿಂತಿದ್ದು, ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸನ್ನು ಓವರ್ ಟೇಕ್ ಮಾಡಲು ಮುಂದಾದರು. ಈ ವೇಳೆ ಎದುರಿನಿಂದ ಮತ್ತೊಂದು ವಾಹನ ಬರುತ್ತಿರುವುದನ್ನು ಕಂಡು ಬೈಕನ್ನು ಎಡಬದಿಗೆ ತಿರುಗಿಸುತ್ತಿದ್ದಂತೆಯೇ, ಅವರ ನಿಯಂತ್ರಣ ತಪ್ಪಿದಂತಾಗಿ ಬೈಕ್ ನಿಂದ ಹೇಮಾ ಅವರು ರಸ್ತೆಗೆಸೆಯಲ್ಪಟ್ಟು ತಲೆಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಪುರಂದರ ಆಚಾರ್ಯರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಹೇಮಾ ಪುರಂದರ ಆಚಾರ್ಯರು ಬಂಟ್ವಾಳ ವಿಶ್ವಜ್ಯೋತಿ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದು, ಮಹಿಳಾ ಸಂಘಟನೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದು, ಉತ್ತಮ ಗಾಯಕಿಯಾಗಿದ್ದರು. ಸಂಗೀತ ತರಗತಿ ನಡೆಸುತ್ತಿದ್ದ ಇವರು, ವಿವಿಧ ಭಜನಾ ತಂಡಗಳಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿದ್ದರು. ಮೃತರು ಪತಿ, ಇಬ್ಬರು ಗಂಡುಹಾಗೂ ಓರ್ವ ಹೆಣ್ಣುಮಗಳ ಸಹಿತ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಹೇಮಾಪುರಂದರ ಆಚಾರ್ಯರ ಅಕಾಲಿಕ ಸಾವಿಗೆ ವಿಶ್ವಜ್ಯೋತಿ ಮಹಿಳಾ ಮಂಡಳಿ ಹಾಗೂ ಬಂಟ್ವಾಳ ವಿಶ್ವಕರ್ಮ ಸಮಾಜಸೇವಾ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.