ಕಾಸರಗೋಡು: ಬಾಂಬ್ ಬೆದರಿಕೆ ಕರೆ ಹಿನ್ನಲೆಯಲ್ಲಿ ಮಂಗಳೂರು – ಕಣ್ಣೂರು ನಡುವೆ ರೈಲು ಸಂಚಾರ ಒಂದು ಗಂಟೆಯಷ್ಟು ವಿಳಂಬಗೊಂಡಿತ್ತು.
ರೈಲುಗಳನ್ನು ಹಲವು ನಿಲ್ದಾಣಗಳಲ್ಲಿ ನಿಲುಗಡೆಗೊಳಿಸಲಾಗಿತ್ತು. ಇದು ಹುಸಿ ಕರೆ ಎಂದು ಮನವರಿಕೆಯಾದ ಬಳಿಕ ರೈಲುಗಳು ಸಂಚಾರ ಬೆಳೆಸಿದವು. ಬೆದರಿಕೆ ಕರೆ ಹಿನ್ನಲೆಯಲ್ಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದರು. ಕಳ್ನಾಡ್- ತಳ೦ಗರೆ ರೈಲ್ವೆ ಹಳಿಯಲ್ಲಿ ಬಾಂಬ್ ಇಟ್ಟಿರುವುದಾಗಿ ರಾತ್ರಿ ಕಾಸರಗೋಡು ಪೊಲೀಸ್ ಠಾಣೆಗೆ ಕರೆಯೊಂದು ಬಂದಿತ್ತು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ರೈಲು ಹಳಿ ಮತ್ತು ನಿಲ್ದಾಣ ಮೊದಲಾದೆಡೆ ತಪಾಸಣೆ ನಡೆಸಿತು.
ಇದರಿಂದ ಮಂಗಳಾ ಎಕ್ಸ್ ಪ್ರೆಸ್ ಕಾನ್ಚಾನ್ಗಾಡ್, ಎಗ್ಮೋರ್ ಎಕ್ಸ್ ಪ್ರೆಸ್ ರೈಲು ಕೋಟಿಕುಳಂ, ಕಾಚಿಗುಡ ಎಕ್ಸ್ ಪ್ರೆಸ್ ರೈಲು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಿ ತಪಾಸಣೆ ನಡೆಸಲಾಯಿತು. ದೂರವಾಣಿ ಸಂಖ್ಯೆಯನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಸೈಬರ್ ಸೆಲ್ ನ ನೆರವನ್ನು ಕೋರಿದ್ದಾರೆ.