ಪುತ್ತೂರು: ಕಲ್ಲಾರೆಯ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ ರವರು ಹಾವು ಹಿಡಿಯುವ ಮೊದಲು ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಪಡೆದು ಕೊಳ್ಳಬೇಕು ಹಾಗೂ ಇತರ ಶರತುಗಳನ್ನೊಳಗೊಂಡ ನೊಟೀಸನ್ನು ಅರಣ್ಯ ಇಲಾಖೆ ಜಾರಿ ಮಾಡಿದೆ.
ಈ ನಿಟ್ಟಿನಲ್ಲಿ ಪುತ್ತೂರಿನ ಉರಗ ತಜ್ಞರೆಂದೇ ಖ್ಯಾತಿಯಾಗಿದ್ದ ಅವರು ಹಾವುಗಳನ್ನು ಹಿಡಿದು ಸುರಕ್ಷಿತ ತಾಣಕ್ಕೆ ಬಿಡುವ ತಮ್ಮ ಸೇವೆಯನ್ನು ಒಂದು ವಾರದಿಂದ ನಿಲ್ಲಿಸಿದ್ದಾರೆ. 1987ರಲ್ಲಿ ಹಾವುಗಳನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆದಿರುವ ರವೀಂದ್ರನಾಥ್ ಐತಾಳರು, ನಿರಂತರವಾಗಿ ಉರಗ ನಿರ್ವಹಣೆ ಮಾಡುತ್ತಿದ್ದಾರೆ. 2003ರಲ್ಲಿ ಪುತ್ತೂರಿನ ಕಲ್ಲಾರೆಯಲ್ಲಿ ಕೇಂದ್ರ ಸರಕಾರದ ಎನಿಮಲ್ ವೆಲ್ಫೇರ್ ಬೋರ್ಡ್ ನಿಂದ ಅನುಮತಿ ಪಡೆದು ‘ಶೇಷವನ’ ಎನಿಮಲ್ ರೆಸ್ಕ್ಯೂ ಆ್ಯಂಡ್ ರಿಹೇಬಿಲಿಟೇಶನ್ ಟ್ರಸ್ಟ್ ಸ್ಥಾಪಿಸಿಕೊಂಡಿದ್ದು, ಹಾವುಗಳನ್ನು ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡಿ ಗುಣಮುಖವಾದ ಮೇಲೆ ಮತ್ತೆ ಕಾಡಿಗೆ ಬಿಟ್ಟು ಬಿಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಪುತ್ತೂರು ವಲಯ ಅರಣ್ಯಾಧಿಕಾರಿ ವ್ಯಾಪ್ತಿಯಲ್ಲಿ ಹಾವುಗಳನ್ನು ಹಿಡಿಯುವ, ಚಿಕಿತ್ಸೆ ನೀಡುವ ಬೇರೆ ತಜ್ಞರೇ ಇಲ್ಲದ ಕಾರಣ ಇದೀಗ ಐತಾಳರು ತೆಗೆದುಕೊಂಡ ನಿರ್ಧಾರದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಕಳೆದ 35 ವರ್ಷಗಳ ಅವಧಿಯಲ್ಲಿ ಸುಮಾರು 60,000 ಹಾವುಗಳನ್ನು ಹಿಡಿದಿರುವ ಐತಾಳರು, ಸುಮಾರು 20,000 ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ ತಂದು ಕೃತಕ ಕಾವು ಕೊಟ್ಟು ಮರಿಯಾದ ನಂತರ ಕಾಡಿಗೆ ಬಿಟ್ಟು ಬಿಡುವ ಕೆಲಸ ಮಾಡಿದ್ದಾರೆ.
ನಿಯಮವನ್ನು ಯಥಾ ಪ್ರಕಾರ ಪಾಲಿಸಲು ಕಷ್ಟಸಾಧ್ಯ:
ಬೆಂಗಳೂರಿನ ಪ್ರಧಾನ ವನ್ಯ ಪ್ರಾಣಿ ಪರಿಪಾಲರ ಆದೇಶದ ಪ್ರಕಾರನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿಯವರು 1987ರಲ್ಲಿ ನನಗೆ ನೀಡಿದ ಅನುಮತಿ ಪತ್ರದಲ್ಲಿ ಯಾವುದೇ ಜಾತಿಯ ಎರಡು ಹಾವುಗಳನ್ನು ಇಟ್ಟುಕೊಳ್ಳಬಹುದು, ಅದಕ್ಕಿಂತ ಹೆಚ್ಚಿನದ್ದನ್ನು ಅರಣ್ಯಕ್ಕೆ ಬಿಡಬೇಕು. ಹಾವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಬಹುದು, ಅರಣ್ಯ ಇಲಾಖೆಗೆ ಅಗತ್ಯ ಬಿದ್ದಾಗ ಸೇವೆ ನೀಡಬೇಕು, ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಕೊಡುವ ಹಾವುಗಳನ್ನು ಹಿಡಿಯಬಹುದು, ಅವುಗಳಿಗೆ ಚಿಕಿತ್ಸೆ ನೀಡಬಹುದು, ಪ್ರತೀ ತಿಂಗಳು ತಾವು ಮಾಡಿದ ಕೆಲಸದ ಬಗ್ಗೆ ಇಲಾಖೆಗೆ ವಿವರವಾದ ವರದಿ ನೀಡಬೇಕು. ಹಾವುಗಳನ್ನು ಮಾರಾಟ ಮಾಡಿ ದುಡ್ಡು ಮಾಡಬಾರದು. ಅವುಗಳನ್ನು ಪ್ರದರ್ಶನದ ವಸ್ತುವಾಗಿ ಬಳಸಬಾರದು ಎಂಬಿತ್ಯಾದಿ ಅಂಶಗಳನ್ನು ಸೇರಿಸಲಾಗಿತ್ತು. ಈ ನಿಯಮಗಳ ಪೈಕಿ ಮೊದಲ ನಿಯಮನ್ನು ಯಥಾಪ್ರಕಾರ ಪಾಲಿಸಲು ಕಷ್ಟ ಎಂದು ನಾನು ಆಗಲೇ ಇಲಾಖೆಗೆ ತಿಳಿಸಿದ್ದೆ. ಸಾರ್ವಜನಿಕರ ವಿನಂತಿ ಮೇರೆಗೆ ಸ್ಥಳಕ್ಕೆ ತೆರಳಿ ಹಾವು ಹಿಡಿದ ಮೇಲೆ ಅದನ್ನು 24 ಗಂಟೆಯ ಒಳಗೆ ಸಂರಕ್ಷಿತ ಅರಣ್ಯದಲ್ಲಿ ಬಿಡಬೇಕು. ಅದಕ್ಕೂ ಮೊದಲು ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಆದರೆ ಇದನ್ನು ಯಥಾಪ್ರಕಾರ ಪಾಲಿಸಲು ನನಗೆ ಕಷ್ಟ. ನಾನೊಬ್ಬ ಸಾರ್ವಜನಿಕ ಸೇವೆಯ ವೈದ್ಯ. ಜನರ ತುರ್ತು ಅಗತ್ಯಕ್ಕಾಗಿ ನಾನು ಸ್ಥಳಕ್ಕೆ ಧಾವಿಸಿ ಹಾವು ಹಿಡಿಯುತ್ತೇನೆ. ಆದರೆ ಕೆಲವೊಮ್ಮೆ ಹಾವುಗಳಿಗೆ ಗಾಯವಾಗಿರುತ್ತದೆ. ಚಿಕಿತ್ಸೆಯ ಅಗತ್ಯವಿರುತ್ತದೆ. ಅರಣ್ಯ ಅಧಿಕಾರಿಗಳು ತಕ್ಷಣಕ್ಕೆ ಲಭ್ಯವಾಗದಿದ್ದರೆ ಅದೂ ಕಷ್ಟ. ಎಲ್ಲದಕ್ಕಿಂತ ಮೇಲಾಗಿ ನಾನು ನನ್ನ ಉದ್ಯೋಗ ಮಾಡಿಕೊಳ್ಳಬೇಕು. ಹಾವು ಹಿಡಿಯುವುದು ಎಂಬುದು ನಾನು ಮಾಡುವ ಸೇವೆ. ಅದರ ಸಾಗಾಟ ವೆಚ್ಚ ಬಿಟ್ಟರೆ ಬೇರೇನೂ ಪ್ರತಿಫಲ ನಾನು ಪಡೆಯುವುದಿಲ್ಲ. ಹೀಗಿರುವಾಗ 24 ಗಂಟೆಯ ಒಳಗೆಯೇ ಮಾಡಬೇಕು ಎಂಬ ಶರತ್ತು ನನಗೆ ಪಾಲಿಸಲು ಕಷ್ಟ ಎಂದು ತಿಳಿಸಿದ್ದೆ. ನನ್ನ ಪರಿಸ್ಥಿತಿ ಮತ್ತು ನನ್ನ ಹಿನ್ನೆಲೆ ಎಲ್ಲವನ್ನೂ ಅಭ್ಯಾಸ ಮಾಡಿದ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪಿದ್ದರು. ಇದರಂತೆ 1987ರಿಂದ ನಾನು ಅಧಿಕೃತವಾಗಿ ಈ ಸೇವೆ ಮಾಡುತ್ತಾ ಇದ್ದೇನೆ. ಪ್ರತೀ ತಿಂಗಳು ನನ್ನಲ್ಲಿ ಇರುವ ಹಾವುಗಳ ಲೆಕ್ಕ, ನಾನು ಹಿಡಿದ ಹಾವುಗಳ ಸಂಖ್ಯೆ, ಚಿಕಿತ್ಸೆ ನೀಡಿದ ವಿವರ, ಉಪನ್ಯಾಸ ನೀಡಿದ ವಿವರ ಎಲ್ಲವನ್ನೂ ಇಲಾಖೆಗೆ ಪ್ರತೀ ತಿಂಗಳೂ ವರದಿ ನೀಡುತ್ತಿದ್ದೇನೆ’ ಎಂದು ಐತಾಳ್ ಹೇಳಿದ್ದಾರೆ. ಆದರೂ 24 ಗಂಟೆಯ ಒಳಗೆ ಅರಣ್ಯಕ್ಕೆ ಬಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಪುತ್ತೂರು ವಲಣ್ಯಾಧಿಕಾರಿ ಫೆ.23ರಂದು ನೊಟೀಸ್ ನೀಡಿದ್ದಾರೆ. ಈ ನಿಯಮ ಇದೇ ರೀತಿ ಪಾಲಿಸಲು ನನಗೆ ಕಷ್ಟ. ನಾನು ಪ್ರಸ್ತುತ ಹಿಡಿದ ಹಾವನ್ನು ಎರಡು ಮೂರು ದಿನಗಳ ಒಳಗೆ ಅರಣ್ಯಕ್ಕೆ ಬಿಡುತ್ತಿದ್ದೇನೆ. ಇದು ಬಿಟ್ಟರೆ ಉಳಿದ ಎಲ್ಲ ನಿಯಮಗಳನ್ನು ಯಥಾಪ್ರಕಾರ ಪಾಲಿಸುತ್ತಿದ್ದೇನೆ. ಕಳೆದ 30 ವರ್ಷಗಳಿಂದ ನನ್ನ ಮೇಲೆ ಒಂದೇ ಒಂದು ದುರುಪಯೋಗದ ಆರೋಪ ಬಂದಿಲ್ಲ. ಇದನ್ನು ಸಾರ್ವಜನಿಕ ಸೇವೆಯ ನೆಲೆಯಲ್ಲಿ ಮಾಡುತ್ತಿದ್ದೇನೆಯೆ ಹೊರತು ಆದಾಯದ ಉದ್ದೇಶವಿಲ್ಲ. ಹಾವು ಹಿಡಿದಿದ್ದಕ್ಕೆ ನಾನೇನು ಶುಲ್ಕ ಸ್ವೀಕರಿಸುವುದಿಲ್ಲ. ಸಾಗಾಟ ವೆಚ್ಚ ಮಾತ್ರ ಪಡೆಯುತ್ತಿದ್ದೇನೆ. ಇಲ್ಲಿಯವರೆಗೆ ನಡೆದು ಬಂದ ರೀತಿಯಲ್ಲೇ ಮುಂದುವರಿಸಲು ಅರಣ್ಯ ಇಲಾಖೆ ಲಿಖಿತ ಅನುಮತಿ ನೀಡಿದರೆ ಮಾತ್ರ ಈ ಸೇವೆ ಮುಂದುವರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.