News Kannada
Friday, September 30 2022

ಕರಾವಳಿ

ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಸಾವು - 1 min read

Photo Credit :

ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಬಂಟ್ವಾಳ:  ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಭಾನುವಾರ ಅಪರಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟುಮಂದಿ ಗಂಭೀರ ಗಾಯಗೊಂಡಿದ್ದಾರೆ.

Road mishap in Mani claims three lives on spot-1

ಮೃತಪಟ್ಟವರು ವರ್ಷಾ(19) ಸಂಧ್ಯಾ(21) ಮತ್ತು ತೇಜಸ್(22)

ಓಮ್ನಿ ಕಾರು ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ಈ ಅವಘಡ ನಡೆದಿದ್ದು, ಮೃತರನ್ನು ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಅಂಗಡಿಯ ಉದ್ಯೋಗಿಗಳಾದ ತೇಜಸ್(22)  ವರ್ಷಾ(19) ಮತ್ತು ಸಂಧ್ಯಾ(21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ  ನಮಿತ, ಪವಿತ್ರ,, ಶರಣ್ಯ, ಶೋಭಾ, ಸುನಿಲ್ ಯಕ್ಷಿತ್, ನಯನಾ ಮತ್ತು ನವ್ಯರನ್ನು  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ  ಇಬ್ಬರ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಸಂಜೀವ ಶೆಟ್ಟಿ ಜವಳಿ ಸಂಸ್ಥೆಯ ಉದ್ಯೋಗಿಗಳಾಗಿರುವ ತೇಜಸ್,  ನಯನಾ, ಸಂಧ್ಯಾ, ನಮಿತ, ಪವಿತ್ರ, ಶರಣ್ಯ, ಶೋಭಾ, ಸುನಿಲ್, ಯಕ್ಷಿತ್, ವರ್ಷಾ ಹಾಗೂ ನವ್ಯರವರು  ಪನೋಲಿ ಬೈಲು ಕ್ಷೇತ್ರಕ್ಕೆಂದು ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಅಪರಾಹ್ನದ ವರೆಗೆ ಜವಳಿ ಅಂಗಡಿಯಲ್ಲಿದ್ದವರು ಅಂಗಡಿ ಬಂದ್ ಆದ ಬಳಿಕ ತೇಜಸ್ ಚಲಾಯಿಸುತ್ತಿದ್ದ ಓಮ್ನಿಯಲ್ಲಿ ಜೊತೆಯಾಗಿ ಪುತ್ತೂರಿನಿಂದ ಹೊರಟು ಪಣೋಲಿ ಬೈಲಿಗೆ ಬರುತ್ತಿದ್ದರು.  ಓಮ್ನಿ ಕಾರು ಕೊಡಾಜೆ ಯಿಂದ ಮುಂದಕ್ಕೆ ಸಾಗಿ ಮಾಣಿಯತ್ತ ಬರುತ್ತಿರುವಂತೆಯೇ ರಿಕ್ಷಾವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ತೆರಳಿ ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟುಮಂದಿ ಗಾಯಗೊಂಡಿದ್ದಾರೆ.

ಘಟನೆಯ ತೀವ್ರತೆಗೆ  ಓಮ್ನಿ ಕಾರಿನ ಡೋರ್ ರಸ್ತೆಯ ಮತ್ತೊಂದು ಭಾಗಕ್ಕೆ ಎಸೆಯಲ್ಪಟ್ಟಿದ್ದು, ಕಾರಿನೊಳಗಿದ್ದ  ವರ್ಷಾ ಮತ್ತು ಸಂಧ್ಯಾ  ಹೊರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರೆ,  ಚಾಲಕ ತೇಜಸ್ ಡಿಕ್ಕಿಯಾದ ತೀವ್ರತೆಗೆ ಕುಳಿತಲ್ಲಿಯೇ ಸಾವನ್ನಪ್ಪಿದ್ದಾನೆ.  ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೂಷಣ್ ಜಿ.ಬೊರಸೆ. ಪುತ್ತೂರು ಡಿವೈಎಸ್ಪಿ ಭಾಸ್ಕರ್ ರೈ, ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ,  ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ, ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ  ಹಾಗೂ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ ಆರ್ ಟಿಸಿ ಅಧಿಕಾರಿಗಳಾದ  ನಾಘರಾಜ್ ಶಿರಾಲಿ, ವೇಣುಗೋಪಾಲ್, ನಾಗರಾಜ್, ಧರ್ಮಯ್ಯ ಭೇಟಿ ನೀಡಿದ್ದಾರೆ.

ಹೆದ್ದಾರಿಯಲ್ಲಿ ರಕ್ತದೋಕುಳಿ..
ಘಟನೆಯಿಂದಾಗಿ ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ರಕ್ತದೋಕುಳಿಯೇ ಹರಿದಿದ್ದು,  ಮೃತದೇಹಗಳ ರಸ್ತೆಯಲ್ಲಿ ಬಿದ್ದುಕೊಂಡಿದ್ದ ದೃಶ್ಯ ಮನಕಲಕುವಂತಿತ್ತು. ಹಿಂದಿನ ಸೀಟಿನಲ್ಲಿದ್ದ ಮೂವರು ಯುವತಿಯರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಘಟನೆಯಿಂದ ಹಾಗೂ ಸಹದ್ಯೋಗಿಗಳೇ ಹೆಣವಾಗಿ ಕಣ್ಣೆದುರಲ್ಲೇ ಬಿದ್ದುದನ್ನು ಕಂಡು ಮಾನಸಿಕವಾಗಿ ಜರ್ಜರಿತರಾದ ಅವರು, ನಿಂತಲ್ಲೇ ಕುಸಿದಿದ್ದು ತಕ್ಷಣವೇ ಸ್ಥಳೀಯರು ಕಾರೊಂದರಲ್ಲಿ ಕಲ್ಲಡ್ಕದ ಆಸ್ಪತ್ರೆಗೆ ಸಾಗಿಸಿದ್ದಾರೆ.  ಡಿಕ್ಕಿಯಾದ ರಭಸಕ್ಕೆ ಓಮ್ನಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಸ್ತೆಯ ಮತ್ತೊಂದು ಪಕ್ಕಕ್ಕೆ ತಳ್ಳಲ್ಪಟ್ಟಿದೆ.
 
ಚಾಲಕ ತಪ್ಪಿಸಲೆತ್ನಿಸಿದ..
ರಿಕ್ಷಾ ವೊಂದನ್ನು ಓವರ್ ಟೇಕ್ ಮಾಡಲು  ಒಮ್ಮಿಂದೊಮ್ಮೆಲೇ  ಧಾವಿಸಿ ಬಂದ ಓಮ್ನಿಗೆ ಬಸ್ ಡಿಕ್ಕಿ ಹೊಡೆಯುವುದನ್ನು  ಬಸ್ ಚಾಲಕ ಶರಣಪ್ಪ ತಪ್ಪಿಸಲು ಯತ್ನಿಸಿದ್ದಾನೆ, ಆದರೆ ಸಾಧ್ಯವಾಗಿಲ್ಲ, ಅಷ್ಟರಲ್ಲೇ ಓಮ್ನಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ, ಅವಘಡ ನಡೆದೇ ಹೋಗಿದೆ ಎಂದು ಬೇಸರದಿಂದ  ನುಡಿಯುತ್ತಾನೆ ಬಸ್ ನಿರ್ವಾಹಕ.

See also  ಅಕ್ಷತಾ ಕೊಲೆ ಆರೋಪಿ ಕಾರ್ತಿಗ್ ಗೆ ನ್ಯಾಯಾಂಗ ಬಂಧನ

ಅತಿವೇಗದಿಂದ ಬಂದ ಓಮ್ನಿಗೆ ಬಸ್  ಡಿಕ್ಕಿ ಹೊಡೆಯುವುದನ್ನು  ತಪ್ಪಿಸುವ ಭರದಲ್ಲಿ ಚಾಲಕ ಬಸ್ಸನ್ನು ರಸ್ತೆಯ ತೀರಾ ಎಡಭಾಗಕ್ಕೆ  ಚಲಾಯಿಸಿದ್ದು, ಬಸ್ ರಸ್ತೆ ಪಕ್ಕದ  ಧರೆಗೆ ತಾಗಿ ನಿಂತಿದೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದು, ಬಸ್ಸಿನ ಚಾಲಕ ತಪ್ಪಿಸಲು ಯತ್ನಿಸದೇ ಇದ್ದಿದ್ದರೆ, ಮತ್ತಷ್ಟು ಜೀವಹಾನಿಯಾಗುವ ಸಾಧ್ಯತೆ ಇತ್ತು ಎನ್ನುತ್ತಾರೆ ಪೊಲೀಸರು.

ದುರಂತದ ಸರಮಾಲೆ..
ರಾಷ್ಟ್ರೀಯ ಹೆದ್ದಾರಿ 75 ರ ವಳಚ್ಛಿಲ್ ನಲ್ಲಿ ಭೀಕರ ಅಪಘಾತ ನಡೆದು ಎರಡು ದಿನ ಕಳೆಯುವ ಮುನ್ನವೇ ಮತ್ತೊಂದು ಅವಘಡ ನಡೆದಿರುವುದು ತಾಲೂಕಿನ ಜನತೆಯನ್ನು ಬೆಚ್ಛಿಬೀಳಿಸಿದೆ.  ವಳಚ್ಛಿಲ್ ನಲ್ಲಿ ಶುಕ್ರವಾರ ಸಂಜೆ ನಡೆದ  ಅವಘಡದಲ್ಲಿ ಐವರು ಮೃತಪಟ್ಟಿದ್ದು, ಅದರ  ಶೋಕಛಾಯೆ ಮರೆಯುವ ಮುನ್ನವೇ ಭಾನುವಾರ ಮೂರು ಎಳೆಜೀವಗಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿವೆ.

ಅಗೇಲು ಸೇವೆಯ ಪ್ರಸಾದ ತರಲು ಹೋಗುತ್ತಿದ್ದರು..
ಮೆಲ್ಕಾರ್ ಸಮೀಪದ ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಪ್ರಖ್ಯಾತಿ ಪಡೆದಿದೆ. ಭಾನುವಾರವೂ ದಾಖಲೆ ಸಂಖ್ಯೆಯ(5432) ಅಗೇಲು ಸೇವೆ ನಡೆದಿದ್ದು, ಪ್ರಸಾದ ಸ್ವೀಕರಿಸಲು ಅಪರಾಹ್ನದ ಬಳಿಕ ಭಕ್ತರು ತಂಡೋಪತಂಡವಾಗಿ ಅಥವಾ ಕುಟುಂಬಸ್ಥರೆಲ್ಲರೂ ಒಟ್ಟಾಗಿ ಬರುವುದು ರೂಢಿ. ಅದರಂತೆ ಅಪರಾಹ್ನದವರೆಗೆ ಪುತ್ತೂರಿನ ಜವುಳಿ ಅಂಗಡಿಯಲ್ಲಿ ಕೆಲಸ ಮಾಡಿದ ಉದ್ಯೋಗಿಗಳ ಪೈಕಿ 11 ಮಂದಿ ಅಗೇಲು ಸೇವೆಯ ಪ್ರಸಾದ ಪಡೆಯಲು, ಒಂದೇ ಓಮ್ನಿ ಕಾರನ್ನೇರಿ ಬರುತ್ತಿದ್ದ ವೇಳೆ ಅವಘಡ ನಡೆದಿದ್ದು,   ಈ ಪೈಕಿ ಮೂವರು  ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು