News Kannada
Wednesday, September 28 2022

ಕರಾವಳಿ

ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್: ನೀರುಪಾಲಾದ ಗ್ಯಾಸ್ - 1 min read

Photo Credit :

ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್: ನೀರುಪಾಲಾದ ಗ್ಯಾಸ್

ಉಪ್ಪಿನಂಗಡಿ: ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಾಟ ಮಾಡುತ್ತಿದ್ದ ಬುಲೆಟ್ ಟ್ಯಾಂಕರೊಂದು ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಸೇತುವೆಗೆ ಡಿಕ್ಕಿ ಹೊಡೆದು, ಗ್ಯಾಸ್ ಟ್ಯಾಂಕರ್ ಇಂಜಿನ್ನಿಂದ ಬೇರ್ಪಟ್ಟು 40 ಅಡಿ ಆಳದ ನದಿಗೆ ಬಿದ್ದಿದೆ. ಪರಿಣಾಮ ಟ್ಯಾಂಕರ್ ನ ಮುಚ್ಚಳ ತೆರೆದುಕೊಂಡು 16 ಟನ್ ಗ್ಯಾಸ್ ಸಂಪೂರ್ಣ ನೀರುಪಾಲಾದ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಎಂಆರ್ ಪಿಎಲ್ ನಿಂದ ಬೆಂಗಳೂರಿಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್(ಕೆಎ 01 ಎಎ 6117)ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಟ್ಯಾಂಕರ್ ಇಂಜಿನ್ನಿಂದ ಬೇರ್ಪಟ್ಟು ಸುಮಾರು 40-45 ಅಡಿ ಆಳಕ್ಕೆ ನದಿ ನೀರಿಗೆ ಬಿದ್ದಿದೆ. ನದಿಗೆ ಬಿದ್ದ ಪರಿಣಾಮ ಟ್ಯಾಂಕರ್ ನ ಮುಚ್ಚಳ ತೆರೆದುಕೊಂಡಿದ್ದು ಅದರಲ್ಲಿದ್ದ ಸುಮಾರು 16 ಟನ್ ಗ್ಯಾಸ್ ನೀರುಪಾಲಾಗಿದೆ. ಟ್ಯಾಂಕರ್ ಚಾಲಕ ತಮಿಳುನಾಡು ನಿವಾಸಿ ಕಣ್ಣನ್(28ವ.), ನಿರ್ವಾಹಕ ಗೌತಮ್(24ವ.)ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಹೆದ್ದಾರಿ ಸಂಚಾರಕ್ಕೆ ತಡೆ: ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಇದರಿಂದಾಗಿ ಬೆಂಗಳೂರು ಕಡೆಗೆ ಹೋಗುವ ಬಸ್ಸು ಸೇರಿದಂತೆ ಇತರೇ ವಾಹನಗಳು ಇಚ್ಲಂಪಾಡಿ, ಮರ್ದಾಳ, ಕೈಕಂಬ ಮೂಲಕ ಗುಂಡ್ಯಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿವೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ವಾಹನಗಳು ಇಚ್ಲಂಪಾಡಿ ಮೂಲಕವೇ ಪ್ರಯಾಣಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ಹಿನ್ನಲೆಯಲ್ಲಿ ಶಿರಾಡಿ, ಗುಂಡ್ಯ ಕಡೆಯಿಂದ ಉದನೆ, ನೆಲ್ಯಾಡಿ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು. ಸಂಜೆ 7 ಗಂಟೆ ವೇಳೆಗೆ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ನೀರು ಬಳಸದಂತೆ ಸೂಚನೆ: ಟ್ಯಾಂಕರ್ ಬಿದ್ದ ನದಿಯ ನೀರು ಗುಂಡ್ಯ ಹೊಳೆ ಮೂಲಕ ಕುಮಾರಧಾರಾ ನದಿ ಸೇರಿ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಮೂಲಕ ಹರಿದುಹೋಗುತ್ತಿದೆ. ಅನಿಲ ಮಿಶ್ರಿತ ನೀರು ಸೇವನೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನದಿ ನೀರು ಬಳಸದಂತೆ ಗ್ರಾ.ಪಂ.ಗಳಿಗೆ ಮನವಿ ಮಾಡಿದ್ದರು. ಈ ಬಗ್ಗೆ ಪೊಲೀಸರು ವಾಟ್ಸಪ್ ಗ್ರೂಪ್ ಗಳಿಗೂ ಸಂದೇಶ ರವಾನಿಸಿ ಮನವಿ ಮಾಡಿಕೊಂಡಿದ್ದರು. ಪುತ್ತೂರು ಪುರಸಭೆಗೆ ನೀರು ಪೂರೈಸುವ 34 ನೆಕ್ಕಿಲಾಡಿ ಪಂಪ್ ಹೌಸ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲೂ ನದಿ ನೀರು ಲಿಫ್ಟ್ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದರು.

5 ಅಗ್ನಿಶಾಮಕ ವಾಹನ ದೌಡು: ನದಿಗೆ ಬಿದ್ದ ಟ್ಯಾಂಕರ್ ನಿಂದ ಗ್ಯಾಸ್ ಲೀಕೇಜ್ ಆಗುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.  ಪುತ್ತೂರಿನ 2, ಬೆಳ್ತಂಗಡಿ, ಬಂಟ್ವಾಳದ ತಲಾ 1 ಹಾಗೂ ಮಂಗಳೂರು ಎಂಆರ್ ಪಿಲ್ ನ 1 ಅಗ್ನಿಶಾಮಕ ಸೇರಿದಂತೆ ಒಟ್ಟು 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು 50ಕ್ಕೂ ಹೆಚ್ಚು ಸಿಬ್ಬಂದಿಗಳು ಆಗಮಿಸಿದ್ದರು. ಆದರೆ ಆ ವೇಳೆಗಾಗಲೇ ಟ್ಯಾಂಕರ್ ನಲ್ಲಿದ್ದ ಅನಿಲ ನೀರುಪಾಲಾಗಿತ್ತು.

See also  ರಾಜೇಂದ್ರ ಕಠಾರಿಯಿಂದ ಮರಳು ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ: ರಮಾನಾಥ ರೈ

ತಪ್ಪಿದ ದುರಂತ: ಸೇತುವೆಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಗ್ಯಾಸ್ ಗಾಳಿಯಲ್ಲಿ ಸೇರಿಕೊಂಡು ಪರಿಸರದ ಸುತ್ತ ದುರ್ವಾಸನೆ ಬೀರಲಾರಂಭಿಸಿದ್ದು, ಮುಂಜಾಗ್ರತಾ ಸಲುವಾಗಿ ಸಂಜೆ ಘಟನೆ ನಡೆದ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಸೋರಿಕೆಯಾದ ಗ್ಯಾಸ್ ಪರಿಸರದ ಎಲ್ಲೆಡೆಯಲ್ಲಿ ಹರಡಿಕೊಂಡಿದ್ದು, ಆದರೆ ಘಟನೆ ನಡೆದ ಪರಿಸರ ನಿರ್ಜನ ಪ್ರದೇಶ ಆಗಿದ್ದು, 1 ಕಿ.ಮೀ. ದೂರದಲ್ಲಿ ಉದನೆ ಪೇಟೆ ಮತ್ತು ಶಾಲೆ ಇರುವಂತದ್ದು. ಹೀಗಾಗಿ ಸಂಭವನೀಯ ದುರಂತ ತಪ್ಪಿದಂತಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಪುತ್ತೂರು ಎಎಸ್ಪಿ ರಿಷ್ಯಂತ್, ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಎಸ್.ಕುಲಕಣರ್ಿ, ಕಡಬ ಎಸ್.ಐ. ಉಮೇಶ್ ಉಪ್ಪಳಿಕೆ, ಸಂಪ್ಯ ಎಸ್ಐ ರವಿ ಬಿ.ಎಸ್., ಪುತ್ತೂರು ಸಂಚಾರಿ ಠಾಣೆ ಎಸ್ಐ ನಾಗರಾಜ್, ಜಿಲ್ಲಾ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಪುತ್ತೂರು ತಹಶೀಲ್ದಾರ್ ಪುಟ್ಟುಸ್ವಾಮಿ, ಉಪ್ಪಿನಂಗಡಿ ನಾಡಕಚೇರಿ ಉಪತಹಶೀಲ್ದಾರ್ ಸದಾಶಿವ ನಾಯ್ಕ್, ಕಂದಾಯ ನಿರೀಕ್ಷಕ ಮಂಜುನಾಥ, ಶಿರಾಡಿ ಗ್ರಾಮಕರಣಿಕ ಹೆರಾಲ್ಡ್ ಸೇರಿದಂತೆ ಹಲವು ಮಂದಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಎಂಆರ್ಪಿಎಲ್ನ ಸೇಫ್ಟಿ ಇಂಜಿನಿಯರ್ ಸಂಜೆ 5.30ರ ವೇಳೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಗ್ಯಾಸ್ ಸಂಪೂರ್ಣ ನೀರುಪಾಲಾಗಿರುವುದನ್ನು ದೃಢಪಡಿಸಿದ್ದಾರೆ. ನದಿ ನೀರಿಗೆ ಬಿದ್ದಿರುವ ಟ್ಯಾಂಕರ್ ಮೇಲಕ್ಕೆತ್ತುವ ಕಾರ್ಯ ಆ.10ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು