ಮೂಡುಬಿದಿರೆ: ಆದಿ ಅಂತ್ಯವಿಲ್ಲದ ಆಯುರ್ವೇದ ಸರ್ವಶ್ರೇಷ್ಠ ಶಾಸ್ತ್ರ. ಮನಸ್ಸು, ಶರೀರಕ್ಕೆ ಬೇಕಾದ ಆರೈಕೆಯು ಆಯುರ್ವೇದಿಂದ ಆಗುತ್ತಿದೆ. ಶೋಭಾವನದಂತಹ ಆಯುರ್ವೇದ ವನವನ್ನು ಸ್ಥಾಪಿಸಿರುವ ಆಳ್ವಾಸ್ ಸಂಸ್ಥೆಯು ಮಾನಸಿಕವಾಗಿ ಸಮಾಜವನ್ನು ಪರಿವರ್ತಿಸುತ್ತಿದೆ. ಹಲವು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಡೀಮ್ಡ್ ವಿಶ್ವವಿದ್ಯಾಲಯವಾಗಿ ಮೂಡಿಬರಲಿ ಎಂದು ಮೂಡುಬಿದಿರೆ ಶ್ರೀ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶುಭ ಹಾರೈಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ಧನ್ವಂತರಿ ಪೂಜೆ ಹಾಗೂ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಆಯುರ್ವೇದ ಚಿಕಿತ್ಸಾ ತಜ್ಞ, ನಿವೃತ್ತ ಪ್ರಾಂಶುಪಾಲ ಡಾ.ಕೆ ವೈ ಕೃಷ್ಣಾಜಿ ಹಾಗೂ ಚಿಕಿತ್ಸಾ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ.ಎಲ್ ನಾಗಿ ರೆಡ್ಡಿ ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಬಿ. ವಿನಯಚಂದ್ರ ಶೆಟ್ಟಿ ಸ್ವಾಗತಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು. ಡಾ.ಎಂ.ಎಸ್ ಕೃಷ್ಣಮೂರ್ತಿ ಸನ್ಮಾನ ಪತ್ರ ವಾಚಿಸಿದರು. ಡಾ.ಸುಬ್ರಹ್ಮಣ್ಯ ಪದ್ಯಾಣ ವಂದಿಸಿದರು.