ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಾನುವಾರ 84ನೇ ಸರ್ವಧರ್ಮ ಸಮ್ಮೇಳನದ ಸಂದರ್ಭ ನಡೆದ ಏಕಪಾತ್ರಾಭಿನಯ ಸರ್ವರರ ಮೆಚ್ಚುಗೆಗೆ ಪಾತ್ರವಾಯಿತು.
ಡ್ರಾಮಾ ಜ್ಯೂನಿಯರ್ ಎಂಬ ರಿಯಾಲಿಟಿ ಶೋದ 24 ಎಪಿಸೋಡ್ ಗಳಲ್ಲಿ ಭಾಗವಹಿಸಿದ ಕುಂದಾಪುರದ ಆದಿತ್ಯ ಎಂ. ಅವರು ಮಹಾಭಾರತದ ಊರು ಭಂಗ ಎಂಬ ಪ್ರಸಂಗವನ್ನು ಏಕಪಾತ್ರಾಭಿನಯಿಸಿದರು. ಧರ್ಮಸ್ಥಳ ದೀಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಕಲೈಮಾಮಣಿ ಗಾಯತ್ರಿ ಗಿರೀಶ್ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ಮೃದಂಗಂ ನಲ್ಲಿ ಪೂಂಗಳಮ್ ಸುಬ್ರಮಣ್ಯನ್, ಪಿಟೀಲಿನಲ್ಲಿ ಉಷಾ ರಾಜಗೋಪಾಲ್, ಖಂಜೀರದಲ್ಲಿ ಸುಂದರ ಕುಮಾರ್ ಸಹಕರಿಸಿದರು.
ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಮಂಗಳೂರು ಮೇಘಾ ಪೈ ಅವರಿಂದ ಭಕ್ತಿ ಸಂಗೀತ, ಧಾರವಾಡದ ಕವನಾ ಹೆಗಡೆ ಇವರಿಂದ ಭರತ ನೃತ್ಯ, ಬಳಿಕ ಶಿವಮೊಗ್ಗ ಚಿದು ಮೆಲೋಡಿ ಯವರಿಂದ ನಡೆದ ಆರ್ಕೆಸ್ಟ್ರಾ ಹಾಗೂ ಮಂಗಳೂರು ಸವಿಜೀವನಂ ನೃತ್ಯ ಕಲಾಕ್ಷೇತ್ರದವರಿಂದ ನೃತ್ಯ ಪ್ರದರ್ಶನ, ಉಡುಪಿ ಶ್ರೀ ಗೌರಿಶಂಕರ ಸಾಂಸ್ಕೃತಿಕ ಪ್ರತಿಷ್ಠಾನದವರಿಂದ ಮಹಿಳಾ ಯಕ್ಷಗಾನ- ಶಿವಲೀಲೆ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಗೌರೀಮಾರುಕಟ್ಟೆ ಉತ್ಸವ ನೆರವೇರಿತು.
ಇಂದು ದೀಪೋತ್ಸವದ ಕೊನೆಯ ದಿನವಾದ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ಸಂಜೆ 6-30 ರಿಂದ ಸ್ಥಳೀಯ ಶ್ರಾವಕ-ಶ್ರಾವಿಕೆಯರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭ ಹೊರನಾಡು ಜಯಶ್ರೀ ಧರಣೇಂದ್ರ ಜೈನ್ ಅವರಿಂದ ಜಿನಭಕ್ತಿಗೀತೆಗಳ ಗಾಯನ ನಡೆಯಲಿದೆ.