ಕಾಸರಗೋಡು: ಒಂದು ಸಾವಿರ ಮತ್ತು ೫೦೦ ರೂ. ಅಮಾನ್ಯಗೊಳಿಸಿದ ಪರಿಣಾಮ ಜನಸಾಮಾನ್ಯರಿಗೆ ಉಂಟಾದ ಸಮಸ್ಯೆ ಪರಿಹರಿಸಲು ಕೇಂದ್ರ ಸರಕಾರದ ವೈಫಲ್ಯ ಹಾಗೂ ಸಹಕಾರಿ ಬ್ಯಾ೦ಕ್ ಗಳ ವಹಿವಾಟು ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ ಆಡಳಿತ ಪಕ್ಷವಾದ ಎಲ್ ಡಿಎಫ್ ಎಫ್ ಕರೆ ನೀಡಿರುವ ಕೇರಳ ಬಂದ್ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣವಾಗಿದೆ .
ಖಾಸಗಿ ಮತ್ತು ಕೆ ಎಸ್ ಆರ್ ಟಿಸಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಕೆಲವೇ ಕೆಲ ಖಾಸಗಿ ವಾಹನಗಳು ಸಂಚಾರ ನಡೆಸುವುದನ್ನು ಬಿಟ್ಟರೆ ಉಳಿದಂತೆ ರಸ್ತೆಗಳು ಬಿಕೋ ಎನ್ನುತ್ತಿವೆ.
ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡಾ ಪ್ರತಿಭಟನಾ ದಿನವನ್ನು ಆಚರಿಸುತ್ತಿದ್ದು, ಇದರಿಂದ ಜನಜೀವನ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಇದೆ.
ಬಸ್ಸು ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಸರಕಾರಿ ಕಚೇರಿಗೆ, ಶಾಲೆಗಳಿಗೆ ತೆರಳುವವರಿಗೆ ಸಮಸ್ಯೆ ತಲೆದೋರಿದ್ದು, ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮಂಗಳೂರು ಹಾಗೂ ಕರ್ನಾಟಕದ ಇತರ ಕಡೆಗಳಲ್ಲಿ ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದೆ. ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿದೆ. ಇದರಿಂದ ಇಂತಹ ಶಾಲೆಗಳಿಗೂ ರಜೆ ನೀಡಲಾಗಿದೆ. ಬ್ಯಾ೦ಕ್ ಗಳು ಕಾರ್ಯಾಚರಿಸುತ್ತಿದೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.
ಜಿಲ್ಲೆಯ ಎಲ್ಲಾ ಕಡೆ ಬಂದ್ ಬಿಸಿ ತಟ್ಟಿದೆ. ಬೆಳಿಗ್ಗೆ ರೈಲುಗಳಲ್ಲಿ ಕಾಸರಗೋಡು ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರು ಬಸ್ಸು ಹಾಗೂ ಇತರ ವಾಹನ ಸೌಲಭ್ಯ ಇಲ್ಲದೆ ಸಮಸ್ಯೆಗೊಳಗಾದರು. ಎಲ್ ಡಿ ಎಫ್ ಕಾರ್ಯಕರತರು ಬೆಳಿಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿ ನಡೆಸಿದರು.