ಬಂಟ್ವಾಳ: ಮಕ್ಕಳು ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಸಮಸ್ಯೆ ಹೇಳಬಾರದಂತೆ, ಶಿಕ್ಷಕರ ತಪ್ಪನ್ನು ಉಲ್ಲೇಖಿಸಬಾರದಂತೆ.. ಹೀಗೆಂದು ಶಾಲಾಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯೋರ್ವಳನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಆಕೆ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ನೀರಪಾದೆ ಹಿ.ಪ್ರಾ.ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮುಖ್ಯ ಶಿಕ್ಷಕಿಯ ದರ್ಪದ ನಡವಳಿಕೆಯ ವಿರುದ್ದ ಪೋಷಕರು ತೀವ್ರ ಆಕ್ರೋಶವ್ಕ್ತಪಡಿಸಿದ್ದಾರೆ. ಬಾಳ್ತಿಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಮಕ್ಕಳ ಗ್ರಾಮ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ ನೀರಪಾದೆ ದ.ಕ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳ ಪೈಕಿ 8ನೆ ತರಗತಿಯ ವಿದ್ಯಾರ್ಥಿನಿಯೋರ್ವಳು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಸರು, ವಾರಕ್ಕೊಂದು ದಿನ ಚಿತ್ರನ್ನ ಹಾಗೂ ವಾರದಲ್ಲಿ ವಿವಿಧ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮೊಸರು, ಚಿತ್ರಾನ್ನಗಳನ್ನು ನೀಡಲಾಗುತ್ತಿಲ್ಲ. ವಾರದ ಎಲ್ಲ ದಿವಸವೂ ಬರೀ ಬೇಳೆ ಸಾಂಬರ್ ನೀಡಲಾಗುತ್ತಿದೆ. ಸಾಂಬರ್ ಗೆ ತರಕಾರಿ ಹಾಕುತ್ತಿಲ್ಲ. ಇದರಿಂದ ಬಿಸಿಯೂಟ ರುಚಿ ಇಲ್ಲದಿರುವುದರಿಂದ ಯಾವುದೇ ವಿದ್ಯಾರ್ಥಿಗಳು ಊಟ ಸೇವಿಸುತ್ತಿಲ್ಲ ಎಂದು ತನ್ನ ಅರಿವಿನ ಸಮಸ್ಯೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಳು.
ಬಳಿಕ ಶಾಲೆಯ ಕಳಪೆ ಬಿಸಿಯೂಟದ ಬಗ್ಗೆ ಗ್ರಾಮ ಸಭೆಯಲ್ಲಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಚರ್ಚೆ ನಡೆದು ಈ ಬಗ್ಗೆ ಮುಖ್ಯಶಿಕ್ಷಕಿಯವರು ವಿಶೇಷ ಗಮನಹರಿಸುವಂತೆ ಸೂಚನೆ ನೀಡಿದ್ದರು. ಅತ್ತ ಚರ್ಚೆಗೆ ವಿರಾಮ ಬಿತ್ತಾದರೂ, ಶಾಲೆಯ ಬಿಸಿಯೂಟದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಆ ವಿದ್ಯಾರ್ಥಿನಿಯನ್ನು ಮುಖ್ಯ ಶಿಕ್ಷಕಿ ಸಭೆ ನಡೆಯುತ್ತಿರುವಾಗಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು, ಸಭೆ ಮುಗಿಸಿ ಶಾಲೆಗೆ ಬಂದ ಬಳಿಕವೂ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆಸಿದ ಮುಖ್ಯ ಶಿಕ್ಷಕಿ ನಮ್ಮ ವಿರುದ್ಧವೇ ದೂರು ನೀಡುತ್ತಿದ್ದಿಯಾ..? ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ ತರಗತಿಯಲ್ಲಿ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾಳೆ. ಸಹ ಶಿಕ್ಷಕಿಯರು ವಿದ್ಯಾರ್ಥಿನಿಯನ್ನುಆರೈಕೆ ಮಾಡಿದ ಬಳಿಕ ಆಕೆ ಚೇತರಿಸಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಅಸ್ವಸ್ಥಗೊಂಡ ಮಾಹಿತಿ ಲಭಿಸಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕಾಂದಿಲ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ್, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಸುಂದರ್ ಸಾಲ್ಯಾನ್, ವಸಂತ್ ಸಾಲ್ಯಾನ್, ಮೋಹನ್ ಪಿ.ಎಸ್., ರಜನಿ, ಎಸ್ಡಿಎಂಸಿ ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಯುವಕ ಮಂಡಲ ಕಾರ್ಯದರ್ಶಿ ರಶೀದ್ ಕೋರ್ಯ, ಹಳೆ ವಿದ್ಯಾರ್ಥಿ ಉಮರ್ ಫಾರೂಕ್ ಶಾಲೆಗೆ ಆಗಮಿಸಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅವರು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರನ್ನು ಫೋನ್ ಕರೆ ಮೂಲಕ ಸಂಪರ್ಕಿಸಿ ಘಟನೆಯನ್ನು ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರಿನಲ್ಲಿ ಸಭೆಯೊಂದರಲ್ಲಿದ್ದರಿಂದ ಅವರ ಸೂಚನೆಯ ಮೇರೆಗೆ ಶಾಲೆಗೆ ಭೇಟಿ ನೀಡಿದ ಬಿಆರ್ ಪಿ ಕೆಂಪನ್ನ ಕುಮಾರ್, ಬಾಳ್ತಿಲ ಸಿಆರ್ ಪಿ ಆರತ ಅಮೀನ್, ತುಂಬೆ ಸಿಆರ್ ಪಿ ನಂದಾ, ಮುಡಿಪು ಸಿಆರ್ಪಿ ರವಿ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಹಾಗೂ ಗ್ರಾಮದ ಪ್ರಮುಖರು ಕೂಡಲೇ ಮುಖ್ಯ ಶಿಕ್ಷಕಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸುವಂತೆ ಪಟ್ಟು ಹಿಡಿದರು.
ಆಕ್ರೋಶಿತರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತಿಗಿಳಿದ ಪೋಷಕರು ಅಕ್ಷರ ದಾಸೋಹ ಯೋಜನೆಯಡಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬರುತ್ತಿದ್ದರೂ ಮಕ್ಕಳಿಗೆ ಸರಿಯಾದ ಬಿಸಿಯೂಟ ಮಾಡಿ ಕೊಡಲು ಮುಖ್ಯ ಶಿಕ್ಷಕಿ ಬಿಡುತ್ತಿಲ್ಲ. ವಾರದ ಎಲ್ಲ ದಿನವೂ ಸಾಂಬರ್, ಅನ್ನ ಮಾತ್ರ ನೀಡಲಾಗುತ್ತಿದೆ. ಇದರಿಂದಾಗಿ ಮಕ್ಕಳು ಊಟ ಸೇವಿಸುತ್ತಿಲ್ಲ. ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಪೋಷಕರನ್ನು ಸಮಾಧಾನ ಪಡಿಸಿದ ಬಿಆರ್ ಪಿ ಕೆಂಪನ್ನ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರಿನಲ್ಲಿ ಸಭೆಯೊಂದು ಇರುವುದರಿಂದ ಇಂದು ಅವರಿಗೆ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಬುಧವಾರ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಸಂದರ್ಭ ನೀವು ಬಂದು ಅವರಿಗೆ ಮಾಹಿತಿ ನೀಡಬಹುದಾಗಿದೆ. ಅವರು ಪರಿಶೀಲನೆ ನಡೆಸಿದ ಬಳಿಕ ತಪ್ಪು ಕಂಡುಬಂದಲ್ಲಿ ಮುಖ್ಯಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.
ಅಧಿಕಾರಿಗಳ ಭರಸವೆಯಿಂದ ಸಮಾಧಾನಗೊಂಡ ಸಭೆಯಲ್ಲಿದ್ದ ಪೋಷಕರು ಹಾಗೂ ಗ್ರಾಮದ ಪ್ರಮುಖರು ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲನೆ ನಡೆಸಿ ಮುಖ್ಯ ಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬೇರೆಡೆಗೆ ವರ್ಗಾಹಿಸಬೇಕು. ತಪ್ಪಿದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಶೌಚಾಲಯಕ್ಕೆ ಬೀಗ!
ಕೆಳವು ದಿನಗಳ ದಿಂದೆ ವಿದ್ಯಾರ್ಥಿಯೋರ್ವ ಶೌಚಾಲಯದ ನೀರಿನ ನಳ್ಳಿ ತುಂಡು ಮಾಡಿದ್ದಾನೆ ಎಂದು ಆರೋಪಿಸಿ ಬಾಳ್ತಿಲ ಗ್ರಾಮದ ನೀರಪಾದೆ ದ.ಕ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶೌಚಾಲಕ್ಕೆ ಬೀಗ ಜಡಿದಿದ್ದಾರೆ ಎಂದು ಶಾಲೆಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಪೋಷಕರು ಆರೋಪಿಸಿದರು.
ವಾರದಿಂದ ಶೌಚಾಲಯ ಬಂದ್ ಆಗಿರುವುದರಿಂದ ವಿದ್ಯಾರ್ಥಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯ ಶಿಕ್ಷಕಿಯಲ್ಲಿ ವಿಚಾರಿಸಿದಾಗ ಅವರು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಪೋಷಕರು ಪ್ರಸ್ತುತ ವರ್ಷದಲ್ಲಿ ಹೊಸದಾಗಿ ಆಗಮಿಸಿರುವ ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳಿಗೆ ವಿನಾ ಕಾರಣ ದೌರ್ಜನ್ಯವೆಸಗುತ್ತಿದ್ದಾರೆ ಎಂದರು.
ಮಕ್ಕಳ ಗ್ರಾಮ ಸಭೆಯಲ್ಲಿ ನೀರಪಾದೆ ದ.ಕ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯೋವಳು ಮಧ್ಯಾಹ್ನದ ಬಿಸಿಯೂಟದ ಸಮಸ್ಯೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಕಾರಣಕ್ಕೆ ಆ ಶಾಲೆಯ ಮುಖ್ಯ ಶಿಕ್ಷಕಿ ನಿಂದಿಸಿದ್ದರಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು ಕೂಡಲೇ ಶಾಲೆಗೆ ಭೇಟಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯ ಸೂಚನೆಯಂತೆ ಇಲ್ಲಿನ ಸಿಆರ್ ಪಿಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ಅಸ್ವಸ್ಥಗೊಂಡ ವಿದ್ಯಾರ್ಥಿನಿಯಿಂದ ಮಾತನಾಡಿ ಮಾಹಿತಿ ಕಲೆ ಹಾಕಿದ್ದೇವೆ. ಈ ಸಂದರ್ಭದಲ್ಲಿ ಇಲ್ಲಿ ಸೇರಿದ ಪೋಷಕರು ಹಾಗೂ ಗ್ರಾಮದ ಪ್ರಮುಖರು ಮುಖ್ಯ ಶಿಕ್ಷಕಿಯ ವಿರುದ್ಧ ವಿವಿಧ ದೂರು ಹಾಗೂ ಆರೋಪ ಮಾಡಿದ್ದಾರೆ. ಅವುಗಳನ್ನು ದಾಖಲಿಸಲಾಗಿದ್ದು ಇವತ್ತೇ ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಮುಂದೆ ಅವರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಬಿಆರ್ ಪಿ ಕೆಂಪನ್ನ ಕುಮಾರ್ ತಿಳಿಸಿದ್ದಾರೆ.