ಕಾಸರಗೋಡು: ಕೇರಳ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಸಾಗಿಸಲಾಗುತಿದ್ದ 13 ಲಕ್ಷ ರೂ.ಗಳ ಅಮಾನ್ಯ ನೋಟುಗಳನ್ನು ಮಂಜೇಶ್ವರ ಅಬಕಾರಿ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮೂಲತ: ಮುಂಬೈ ನಿವಾಸಿ, ಕಣ್ಣೂರಿನಲ್ಲಿ ವಾಸವಾಗಿರುವ ದನೋಜಿ (40) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕೇರಳ ಕೆ ಎಸ್ ಆರ್ ಟಿಸಿ ಬಸ್ಸನ್ನು ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ ಹಿಂಬದಿ ಸೀಟಿನಡಿಯಲ್ಲಿನ ಬ್ಯಾಗ್ ನಲ್ಲಿ ನೋಟುಗಳು ಪತ್ತೆಯಾಗಿದೆ.
ಅಮಾನ್ಯಗೊಂಡ 1000 ರೂ. ಮುಖಬೆಲೆಯ 1200 ನೋಟುಗಳು ಹಾಗೂ 500 ರೂ. ಮುಖ ಬೆಲೆಯ 200 ನೋಟುಗಳು ಸೇರಿದಂತೆ ಒಟ್ಟು 13 ಲಕ್ಷ ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಾನು ಚಿನ್ನಾಭರಣ ಮಾರಾಟಗಾರನಾಗಿದ್ದು, ಇದರಿಂದ ಲಭಿಸಿದ ಹಣ ಎಂದು ಬಂಧಿತ ಮಾಹಿತಿ ನೀಡಿದ್ದಾನೆ. ಪ್ರಕರಣವನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾ೦ತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ದಿನಗಳ ಹಿಂದೆಯಷ್ಟೇ ಅಬಕಾರಿ ದಳದ ಸಿಬಂದ್ದಿಗಳು 20 ಲಕ್ಷ ರೂ. ನ ಅಮಾನ್ಯಗೊಂಡ ನೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಾಸರಗೋಡಿನಿಂದ ಆರು ಲಕ್ಷ ರೂ. ಹೊಸ ನೋಟುಗಳಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಹಳೆ ನೋಟು ವಿನಿಮಯ ಜಾಲ ಸಕ್ರಿಯವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.