ಉಳ್ಳಾಲ: ಕೇರಳ-ಕರ್ನಾಟಕ ಗಡಿ ಭಾಗದಲ್ಲಿರುವ ಅವರ್ ಲೇಡಿ ಆಫ್ ಎಸಪ್ಷನ್ (ಅಮಲೋದ್ಭವ ಮಾತೆ) ಮರಿಯಾಶ್ರಮ ಚರ್ಚ್ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಡಿ.12 ರಂದು ಮಂಗಳೂರು ಬಿಷಪ್ ಡಾ.ಅಲೋಷಿಯಸ್ ಪಾವ್ಲ್ ಡಿಸೋಜಾ ಉದ್ಘಾಟಿಸಲಿದ್ದಾರೆ ಎಂದು ಚರ್ಚಿನ ಧರ್ಮಗುರು ಫಾ.ನೆಲ್ಸನ್ ಒಲಿವೇರಾ ಹೇಳಿದ್ದಾರೆ.
ತಲಪಾಡಿ ಚರ್ಚ್ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 30 ವರ್ಷಗಳ ಹಿಂದೆ 30 ಕುಟುಂಬಗಳಿಗೆ ಮಾತ್ರ ನಿರ್ಮಾಣಗೊಂಡಿದ್ದ ದೇವಾಲಯ ಸದ್ಯ 205 ಕ್ರೈಸ್ತ ಕುಟುಂಬಗಳಿಗೆ ವಿಸ್ತರಿಸಿದೆ. ಮಂಜೇಶ್ವರ ದೇವಾಲಯಕ್ಕೆ ಒಳಪಟ್ಟಿದ್ದ ಚರ್ಚ್ 1983 ರ ಜೂ.1 ರ ನಂತರ ಸ್ವತಂತ್ರ್ಯಗೊಂಡಿತ್ತು. ಭಾನುವಾರದ ಪೂಜೆ ಹಾಗೂ ಹಬ್ಬ ಹರಿದಿನಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲು ಸ್ಥಳದ ಅಡಚಣೆಯುಂಟಾಗಿತ್ತು. ಇದನ್ನು ಮನಗಂಡ ದೇವಾಲಯದ ಧರ್ಮಗುರುಗಳು ಹಾಗೂ ದೇವಾಲಯದ ಪಾಲನಾ ಸಮಿತಿ, ಭಕ್ತಾಧಿಗಳು ಸೇರಿಕೊಂಡು ವಿಸ್ತಾರವಾದ ಚರ್ಚ್ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಿ, ಚರ್ಚ್ ಗೆ ಒಳಪಟ್ಟ ಆರು ವಾರ್ಡ್ಗಳ ಜನ ಹಗಲು ರಾತ್ರಿ ದುಡಿದು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ಕಾಸರಗೋಡು ವಲಯದ ಮುಖ್ಯ ಧರ್ಮಗುರು ಫಾ. ವಿನ್ಸೆಂಟ್ ಡಿ’ಸೋಜ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸದಸ್ಯ ಪಿ.ಬಿ.ಅಬ್ದುಲ್ ರಝಾಕ್, ಮಂಜೇಶ್ವರ ವಾರ್ಡ್ ಸದಸ್ಯ ಭಗವಾನ್ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಪಾಲನಾ ಸಮಿತಿ ಉಪಾಧ್ಯಕ್ಷ ಆಂಟನಿ ಮೊಂತೇರೊ, ಕಾರ್ಯದರ್ಶಿ ಶಾಂತಿ ಡಿಸೋಜಾ, ಪಾಲನಾ ಸಮಿತಿಯ ಮರಿಯಾ ಡಿಸೋಜಾ, ಸ್ಟ್ಯಾನಿ ಡಿಸೋಜಾ ಉಪಸ್ಥಿತರಿದ್ದರು.