ಪುತ್ತೂರು: ಅಮಾನ್ಯಗೊಂಡ ರೂ.500 ಮತ್ತು 1ಸಾವಿರದ ನೋಟು ಮತ್ತು ಆ ನೋಟಿನ ಬದಲಾವಣೆಗೆ ನಿರ್ದಿಷ್ಟ ಲೆಕ್ಕವನ್ನು ಆದಾಯ ಇಲಾಖೆಗೆ ತೋರಿಸಬೇಕಾದ ಹಿನ್ನೆಲೆಯಲ್ಲಿ ಕಪ್ಪು ಹಣವನ್ನು ಬಿಳಿ ಮಾಡಲು ಕಮೀಷನ್ ವ್ಯವಹಾರ ಅಲ್ಲಲ್ಲಿ ನಡೆಯುತ್ತಿದ್ದು ಪುತ್ತೂರಿನಲ್ಲೂ ವ್ಯವಹಾರ ಕುದುರಿಸಲು ಬಂದಿದ್ದ ಕಲ್ಲಡ್ಕ ನಿವಾಸಿಗಳಾದ ಮೂವರನ್ನು ದ.7ರಂದು ಪುತ್ತೂರು ಪೊಲೀಸರು ಬಂಧಿಸಿದ್ದು, ಅವರಿಂದ ರೂ. 18.80 ಲಕ್ಷ ನಗದನ್ನು ವಶ ಪಡಿಸಿಕೊಂಡಿದ್ದಾರೆ.
ಕಲ್ಲಡ್ಕ ಗೋಳ್ತಮಜಲು ನಿವಾಸಿ ಇಬ್ರಾಹಿಂರವರ ಪುತ್ರ ಜಾಫರ್ ಶರೀಫ್ (28ವ), ಮಾಣಿಮಜಲು ನಿವಾಸಿ ಅಬೂಬಕ್ಕರ್ ರವರ ಪುತ್ರ ನಝೀರ್ (25ವ), ಕೆ.ಸಿ ರೋಡ್ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರ ಮುಹಮ್ಮದ್ ಇಕ್ಬಾಲ್(26ವ)ರವರನ್ನು ಬಂಧಿತ ಆರೋಪಿಗಳು. ಅವರ ಬಳಿಯಿದ್ದ ರೂ. 2ಸಾವಿರ ಮುಖ ಬೆಲೆಯ ರೂ. 16, 80, 000ದ ಹೊಸ ನೋಟುಗಳು, ರೂ. 100ರ ಮುಖಬೆಲೆಯ ನೂರು ನೋಟುಗಳುಳ್ಳ 19 ಕಂತೆಗಳು ಮೌಲ್ಯ ರೂ. 1,90,700 ಮತ್ತು ರೂ. 50 ಮುಖಬೆಲೆಯ ನೋಟು ರೂ. 9,300 ಸೇರಿ ಒಟ್ಟು ರೂ. 18,80, 000 ಹಾಗೂ ಅವರು ಸಂಚರಿಸುತ್ತಿದ್ದ ರಿಡ್ಜ್ ಕಾರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಕಾರೊಂದರಲ್ಲಿ ಸುಳ್ಯ ಕಡೆಗೆ ಕಪ್ಪು ಹಣ ಸಾಗಾಟ ಆಗುತ್ತಿರುವ ಬಂದ ಖಚಿತ ಮಾಹಿತಿಯೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕ ಭೂಷನ್ ಗುಲಾಬ್ ರಾವ್ ಬೋರಸೆಯವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿಯವರ ಮಾರ್ಗದರ್ಶನದಂತೆ ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ.ರವರ ಆದೇಶದಂತೆ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಸಂಪ್ಯ ಠಾಣಾ ಎಸ್.ಐ ಅಬ್ದುಲ್ ಖಾದರ್ ಹಾಗೂ ಸಿಬಂದಿಗಳು ಮುಕ್ರಂಪಾಡಿ ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪುತ್ತೂರು ಮಾರ್ಗವಾಗಿ ಸುಳ್ಯ ಕಡೆ ತೆರಳುತ್ತಿದ್ದ ಮಾರುತಿ ರಿಡ್ಜ್ ಕಾರು (ಕೆ.ಎ. 41 ಎನ್ 3434)ನ್ನು ತಪಾಸಣೆ ನಡೆಸಿದರು.
ಈ ವೇಳೆ ಕಾರಿನಲ್ಲಿದ್ದ ಚಾಲಕರ ಹೊರತು ಪಡಿಸಿ ಈರ್ವರಲ್ಲಿ 2 ಪ್ಲಾಸ್ಟಿಕ್ ಚೀಲಗಳಿದ್ದು, ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಅವರು ತದ್ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆ ಪ್ಲಾಸ್ಟಿಕ್ ಚೀಲಗಳನ್ನು ತಪಾಸಣೆ ನಡೆಸಿದಾಗ ರೂ. 2ಸಾವಿರ ಮತ್ತು ರೂ. 100 ಹಾಗೂ 50ರ ಮುಖ ಬೆಲೆಯ ನೋಟಿನ ಕಂತೆಗಳು ಪತ್ತೆಯಾಯಿತು. ಕೂಡಲೆ ಕಾರು, ಹಣ ಸಹಿತ ಆರೋಪಿಗಳನ್ನು ವಶಕ್ಕೆ ತೆಗೆದು ಎ.ಎಸ್ಪಿ ಮುಂಭಾಗದಲ್ಲಿ ಇನ್ನಷ್ಟು ವಿಚಾರಣೆ ನಡೆಸಿದಾಗ ಹಳೆ ನೋಟನ್ನು ಕಮಿಷನ್ ಆಧಾರದಲ್ಲಿ ಹೊಸ ನೋಟುಗಳಿಗೆ ಬದಲಾಯಿಸಲು ಬಂದಿರುವುದಾಗಿ ಅವರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರೊಬೆಷನರಿ ಎಸ್.ಐ ಮಂಜುನಾಥ್, ಸಂಪ್ಯ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರ, ಕಾನ್ಸ್ಟೇಬಲ್ ರವೂಫ್, ಪುತ್ತೂರು ನಗರ ಠಾಣೆಯ ಹೆಡ್ಕಾನ್ಸ್ಟೇಬಲ್ ಸ್ಕರಿಯ, ಕಾನ್ಸ್ಟೇಬಲ್ಗಳಾದ ಪ್ರಶಾಂತ್ ರೈ, ವಿಶ್ವನಾಥ್, ವಿನಯ್, ರವಿಚಂದ್ರ ಭಾಗವಹಿಸಿದ್ದರು. ಉಪತಹಶೀಲ್ದಾರ್ ಶ್ರೀಧರ್ ಕೆ, ಪ್ರಥಮ ದರ್ಜೆ ಸಹಾಯಕ ಮಲ್ಲಿಕ್ ಕುಮಾರ್, ಕರ್ನಾಟಕ ಬ್ಯಾಂಕ್ ಮೆನೇಜರ್ ಶ್ರೀಹರಿ ಮತ್ತು ಸಿಬಂದಿವರ್ಗದವರು ನೋಟುಗಳ ಪರಿಶೀಲನೆಗೆ ಸಹಕರಿಸಿದರು.