ಕಾಸರಗೋಡು: ನಕಲಿ ಪಾಸ್ ಪೋರ್ಟ್ ಪಡೆದು ಕಾಲಾವಧಿ ಮುಗಿದ ಬಳಿಕ ನವೀಕರಿಸಲು ಅರ್ಜಿ ಸಲ್ಲಿಸಿದ ಯುವಕನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ದೇಳಿಯ ಅಬ್ದುಲ್ ಸತ್ತಾರ್ ( 36) ಎಂದು ಗುರುತಿಸಲಾಗಿದೆ. ಬೇಕಲ ಪೆರು೦ಬಳ ತುರುತ್ತಿ ನಿವಾಸಿಯಾಗಿದ್ದ ಅಬ್ದುಲ್ ಸತ್ತಾರ್ ಕೆಲ ವರ್ಷಗಳ ಹಿಂದೆ ಕಾಸರಗೋಡು ದೇಳಿಗೆ ವಾಸ ಬದಲಿಸಿದ್ದರು. ಈ ಹಿಂದೆ ನಕಲಿ ಪಾಸ್ ಪೋರ್ಟ್ ಪಡೆದು ಗಲ್ಫ್ ಗೆ ತೆರಳಿದ್ದ ಈತ ಪಾಸ್ ಪೋರ್ಟ್ ಕಾಲಾವಧಿ ಮುಗಿದ ಹಿನ್ನಲೆಯಲ್ಲಿ ನವೀಕರಿಸಲು ಮತ್ತೆ ಅರ್ಜಿ ಸಲ್ಲಿಸಿದ್ದನು.
ಮಲಪ್ಪುರಂ ನ ಕುಞ ಮೊಯ್ದಿನ್ ಎಂಬವರ ಪುತ್ರ ಸಲ್ಮಾನ್ ಹಾರಿಸ್ ಎಂಬ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆದಿದ್ದನು .ಆದರೆ ಈ ಬಾರಿ ದೇಳಿಯ ವಿಳಾಸ ನೀಡಿ ಪಾಸ್ ಪೋರ್ಟ್ ಗೆ ಮರು ಅರ್ಜಿ ಸಲ್ಲಿಸಿದ್ದನು. ಆದರೆ ದಾಖಲೆಗಳನ್ನು ತಪಾಸಣೆ ನಡೆಸಿದಾಗ ನಕಲಿ ಪಾಸ್ ಪೋರ್ಟ್ ಎಂದು ಬೆಳಕಿಗೆ ಬಂತು.
ಅಬ್ದುಲ್ ಸತ್ತಾರ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪೊಯಿನಾಚಿಯ ಓರ್ವ ವ್ಯಕ್ತಿ ನಕಲಿ ಪಾಸ್ ಪೋರ್ಟ್ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 2008 ರಲ್ಲಿ 15 ಸಾವಿರ ರೂ. ನೀಡಿದ್ದಾಗಿ ಈತ ತಿಳಿಸಿದ್ದಾನೆ.
ಕಾಸರಗೋಡು ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ನಕಲಿ ಪಾಸ್ ಪೋರ್ಟ್ ಜಾಲ ಕುರಿತು ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆ ಇದೆ.