ಉಳ್ಳಾಲ: ಅಮಾಯಕ ಹಿಂದೂ ಯುವಕರ ಮನೆಗಳಿಗೆ ದಾಳಿ ನಡೆಸಿ ಅವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸುತ್ತಿರುವ ಉಳ್ಳಾಲ ಪೊಲೀಸರು ಹಿಂದೂ ವಿರೋಧಿ ನೀತಿ ಮುಂದುವರಿಸಿದಲ್ಲಿ ಉಗ್ರ ಹೋರಾಟ ಎದುರಿಸಬೇಕಾದೀತು ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಎಚ್ಚರಿಕೆಯನ್ನು ಹಾಕಿದ್ದಾರೆ.
ನ.24 ರಂದು ತಲಪಾಡಿ ಬಳಿ ಸಿಟಿ ಬಸ್ ಸಿಬ್ಬಂದಿ ಅಶ್ರಫ್ ಮತ್ತು ಹಿಮದ್ ಎಂಬವರ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಪಾಡಿ ಹಾಗೂ ಕುಂಪಲ ಭಾಗದ ಅಮಾಯಕ ಹಿಂದು ಯುವಕರ ಮನೆಗಳಿಗೆ ನುಗ್ಗಿ ಅವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸುತ್ತಿರುವ ಉಳ್ಳಾಲ ಪೊಲೀಸರ ನೀತಿಯನ್ನು ಖಂಡಿಸಿ ಉಳ್ಳಾಲ ಠಾಣೆಗೆ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ನೇತೃತ್ವದಲ್ಲಿ ಗುರುವಾರ ಸಂಜೆ ಹಾಕಿದ ಮುತ್ತಿಗೆ ಸಂದರ್ಭ ಮಾತನಾಡಿದರು.
ಬಸ್ಸು ಸಿಬ್ಬಂದಿ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಪಲ ಹಾಗೂ ತಲಪಾಡಿ ನಿವಾಸಿ ದೀಕ್ಷಿತ್, ಮಹೇಶ್, ಸಂದೇಶ್ ಮತ್ತು ರವೀಶ್ ಎಂಬವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇವರ ಮೇಲೆ ನ.23 ರಂದು ಕಿನ್ಯಾ ಸಮೀಪ ನಡೆದ ಬಸ್ ಚಾಲಕ ವರುಣ್ ಎಂಬಾತನ ಹಲ್ಲೆ ಪ್ರಕರಣವನ್ನು ಹೊರಿಸಿದ್ದರು. ಇದರಲ್ಲಿ ಸಂದೇಶ್ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ, ಆತನ ಮೇಲೆ ಪ್ರಕರಣ ದಾಖಲಿಸಿ ಸದ್ಯ ಜೈಲಿನಲ್ಲಿದ್ದಾನೆ. ಅಷ್ಟಕ್ಕೇ ವಶಕ್ಕೆ ಪಡೆದುಕೊಳ್ಳುವವರನ್ನು ನಿಲ್ಲಿಸದ ಪೊಲೀಸರು ಮತ್ತೆ ವಾರದ ಅಂತರದಲ್ಲಿ ತಲಪಾಡಿಯ ಧ್ರುವ ಮತ್ತು ಗಣೇಶ್ ಎಂಬ ಅಮಾಯಕ ಯುವಕರನ್ನು ಅದೇ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದುಕೊಂಡಿದ್ದರು. ಇವರನ್ನು ವಶಕ್ಕೆ ಪಡೆಯುವ ವೇಳೆ ಮನೆಯೊಳಗೆ ನುಗ್ಗಿ, ಮನೆಮಂದಿಯ ಎದುರುಗಡೆ ಯುವಕರಿಗೆ ಹಲ್ಲೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ ಅವರು ಗಣೇಶ್ ಅಂಗಡಿ ನಿರ್ವಹಿಸುವವನಾಗಿದ್ದರೆ, ಧ್ರುವ ಹಲ್ಲೆ ಸಂದರ್ಭ ಸ್ಥಳದಲ್ಲೇ ಇರಲಿಲ್ಲ. ಈವರೆಗೆ ಇಬ್ಬರು ಸೇರಿದಂತೆ 25 ಮಂದಿಯನ್ನು ವಿಚಾರಣೆಗೆಂದು ವಶಕ್ಕೆ ಪಡೆದುಕೊಳ್ಳುವ ಉಳ್ಳಾಲ ಪೊಲೀಸರು ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿದರು.
ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹಿಂದು ಯುವಕನ ಹತ್ಯೆ ಸೇರಿದಂತೆ ಚೂರಿ ಇರಿತ, ಕೊಲೆಯತ್ನ ಪ್ರಕರಣಗಳು ನಡೆದಿವೆ. ಆ ಪ್ರಕರಣಗಳು ನಡೆದು ಎರಡು ತಿಂಗಳಾದರೂ ಈವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಆದರೆ 15 ದಿನದ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹೆಚ್ಚಿನ ಒಲವು ತೋರಿಸುತ್ತಿರುವ ನೀತಿ ಸಂಶಯ ವ್ಯಕ್ತಪಡಿಸುವಂತಾಗಿದೆ. ತಲಪಾಡಿಯ ಸ್ಥಳೀಯ ಕಾಂಗ್ರೆಸ್ ಮುಖಂಡನ ಹೇಳಿಕೆಯಂತೆ ಹಿಂದು ಯುವಕರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಆರ್ ಎಸ್ ಎಸ್ ಮುಕಂಡ ರಾಮಮೋಹನ್ ಹತ್ಯೆ ಯತ್ನ, ಉಳ್ಳಾಲದ ತಾರನಾಥ್ ಯಾದವ್ ಕೊಲೆಯತ್ನ, ಕೊಣಾಜೆಯಲ್ಲಿ ಕಾರ್ತಿಕ್ ಕೊಲೆ ಸೇರಿದಂತೆ ಚೂರಿ ಇರಿತದ ಪ್ರಕರಣ ಹಲವು ನಡೆದಿವೆ. ಹಿಂದು ಯುವಕರ ಮೇಲೆ ನಿರಂತರ ದೌರ್ಜನ್ಯ ಮುಂದುವರಿಸಿ, ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಉಳ್ಳಾಲದಾದ್ಯಂತ ಉಗ್ರ ಹೋರಾಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಪ್ರತಿಭಟನೆಗೆ ಮಣಿದು ಅಮಾಯಕನ ಬಿಡುಗಡೆ: ಹಿಂದು ಸಂಘಟನೆ ಮುಖಂಡರು ಹಾಗೂ ಬಿಜೆಪಿ ನಾಯಕರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಠಾಣಾಧಿಕಾರಿ ಗೋಪಿಕೃಷ್ಣ ಅವರನ್ನು ತೀವ್ರ ತರಾಟೆಗೆ ತೆಗೆಯುತ್ತಿದ್ದಂತೆ ಬುಧವಾರ ವಶಕ್ಕೆ ಪಡೆದುಕೊಂಡಿದ್ದ ತಲಪಾಡಿಯ ಧ್ರುವ ಎಂಬ ಯುವಕನನ್ನು ಬಿಡುಗಡೆಗೊಳಿಸಿದ್ದಾರೆ. ಆ ಬಳಿಕ ಠಾಣೆಗೆ ಹಾಕಲಾಗಿದ್ದ ಮುತ್ತಿಗೆಯನ್ನು ಕೊನೆಗೊಳಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ತಲಪಾಡಿ ಪಂ.ಅಧ್ಯಕ್ಷ ಸುರೇಶ್ ಆಳ್ವ, ಹಿಂದು ಮುಖಂಡ ಹರೀಶ್ ಕುತ್ತಾರ್, ಹಿಂದು ಜಾಗರಣಾ ವೇದಿಕೆ ಮಂಗಳೂರು ಘಟಕದ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಸುಭಾಷ್ ಪಡೀಲ್, ಕೃಷ್ಣ ಶೆಟ್ಟಿ ತಾಮಾರು, ಜೀವನ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಗೋಪಿನಾಥ್ ಬಗಂಬಿಲ, ಪ್ರಕಾಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.