ಬೆಳ್ತಂಗಡಿ: ಪಡಿತರ ಚೀಟಿಗೆ ಆಧಾರ್ ನಂಬರ್ ಲಿಂಕ್ ಆಗದೇ ಪಡಿತರ ವಸ್ತುಗಳು ದೊರೆಯದ ಕುಟುಂಬಗಳಿಗೆ ಮತ್ತೆ ಆಧಾರ್ ಲಿಂಕ್ ಮಾಡಲು ಶುಕ್ರವಾರ ಬೆಳ್ತಂಗಡಿ ತಾಲೂಕು ಕಚೇರಿಯ ಆಹಾರ ಇಲಾಖೆ ಕಚೇರಿಗೆ ಎದುರು ಸರತಿಯ ಸಾಲಿನಲ್ಲಿ ನಿಂತಿದ್ದ ಜನರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇದರಿಂದ ಜನರು ಆಹಾರ ಇಲಾಖೆಯ ಮುಂಭಾಗದಲ್ಲಿ ಉರಿಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಬೇಕಾಯಿತು. ಬೆಳಗ್ಗಿನಿಂದಲೇ ಜನ ಕ್ಯೂನಲ್ಲಿ ನಿಂತಿದ್ದರು. ಬೆಳಗ್ಗೆ 9 ಗಂಟೆಗೆ ನಿಂತ ಜನರಿಗೆ ಮಧ್ಯಾಹ್ನದ ಬಳಿಕ ಅವಕಾಶ ಸಿಕ್ಕಿದೆ. ತಾಲೂಕಿನ ನೆರಿಯ, ಆರಂಬೋಡಿ, ಇಳಂತಿಲ, ಪಡಂಗಡಿ, ಕೊಕ್ಕಡ ಮೊದಲಾದ ದೂರದ ಊರಿನಿಂದ ಜನರು ಉರಿಬಿಸಿಲಿನಲ್ಲಿ ಕಾದು ಕಾದು ಸುಸ್ತಾದರು.
ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಸೇರ್ಪಡೆ ಆಗದ ಪಡಿತರ ಚೀಟಿಗಳು ರದ್ದುಗೊಂಡಿತ್ತು. ಅದನ್ನು ಸೇರ್ಪಡೆ ಮಾಡಲು ಆಹಾರ ಇಲಾಖೆಗೆ ಬಂದು ಸೇರ್ಪಡೆ ಮಾಡಬೇಕಾಗಿತ್ತು. ಕೆಲವು ಫಲಾನುಭವಿಗಳ ಪಡಿತರ ಚೀಟಿಗೆ ಆಧಾರ ಸಂಖ್ಯೆ ಸೇರ್ಪಡೆ ಆಗಿದ್ದರೂ ಮನೆಯವರ ಕೆಲವು ಹೆಸರುಗಳು ಸೇರ್ಪಡೆ ಆಗಿರಲಿಲ್ಲ. ಅದನ್ನು ಗ್ರಾಮ ಪಂಚಾಯಿತಿಯಲ್ಲಿ ಸೇರ್ಪಡೆ ಮಾಡಲು ಅವಕಾಶವಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕುಟುಂಬದ ಯಾವುದೇ ಒಬ್ಬ ಸದಸ್ಯನ ಹೆಸರು ಆಧಾರ ಸಂಖ್ಯೆ ಸೇರ್ಪಡೆಯಾಗದಿದ್ದರೆ ಅದನ್ನು ರದ್ದುಗೊಳಿಸಲಾಗಿತ್ತು.
ಗೊಂದಲ: ರದ್ದಾದ ರೇಶನ್ ಕಾರ್ಡ್ ಆಧಾರ ಸಂಖ್ಯೆ ಸೇರಿಸಲು ಬೆಳ್ತಂಗಡಿ ಆಹಾರ ಇಲಾಖೆಗೆ ಬರಬೇಕಾಗುತ್ತದೆ. ಒಬ್ಬರ ಹೆಸರು ಸೇರ್ಪಡೆಯಾಗಿದ್ದರೆ ಗ್ರಾಮ ಪಂಚಾಯಿತಿಯಲ್ಲಿ ಉಳಿದವರ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಆದರೆ ಪಡಿತರ ಚೀಟಿಯಲ್ಲಿ ಮನೆಯವರೆಲ್ಲರ ಹೆಸರು ಸೇರ್ಪಡೆ ಆಗದಿದ್ದರೆ ಪಡಿತರ ವಸ್ತುಗಳು ಸಿಗುತ್ತಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಜನರಿಗೆ ಇಲ್ಲವಾಗಿದೆ. ಗ್ರಾಮ ಪಂಚಾಯಿತಿಗೆ ಹೋದರೆ ಆಹಾರ ಇಲಾಖೆಗೆ ಹೋಗಿ ಎನ್ನುತ್ತಿದ್ದಾರೆ. ಇಲ್ಲಿ ಬಂದರೆ ಬೆಳಗ್ಗಿನಿಂದ ಸಂಜೆಯವರೆಗೂ ಕ್ಯೂನಲ್ಲಿ ನಿಂತರೂ ಮರುದಿನ ಬರುವ ಅವ್ಯವಸ್ಥೆಯಾಗಿದೆ ಎಂದು ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತರಾಟೆ: ತಾಲೂಕಿನ ಗ್ರಾಮೀಣ ಭಾಗದಿಂದ ಬಂದ ಜನರು ಉರಿಬಿಸಿಲಿನಲ್ಲಿ ಕ್ಯೂನಲ್ಲಿ ನಿಂತಿದ್ದರೂ ಅವರಿಗೆ ಯಾವುದೇ ವ್ಯವಸ್ಥೆ ಮಾಡದಿರುವ ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾಪಂ. ಸದಸ್ಯರಾದ ಶಶಿಧರ್ ಎಂ, ಸುಧಾಕರ್ ಬಿ.ಎಲ್, ಸ್ಥಳಕ್ಕೆ ಆಗಮಿಸಿ ಸರತಿಯಲ್ಲಿದ್ದ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳಗ್ಗಿನಿಂದ ಕ್ಯೂನಲ್ಲಿ ನಿಂತಿದ್ದಾರೆ. ಸಿಬ್ಬಂದಿಗಳ ಕೊರತೆ ಇದೆ. ಇರುವ ಎರಡು ಕಂಪ್ಯೂಟರಿನಲ್ಲಿ ಸೇರ್ಪಡೆ ನಿಧಾನವಾಗುತ್ತಿದೆ. ಕ್ಯೂನಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ. ಊಟಕ್ಕೆ ಹೋಗಲು ಗೊತ್ತಿಲ್ಲ. ಸರತಿಯಿಂದ ಹೋದರೆ ಪುನಃ ಸರತಿಯಲ್ಲಿ ನಿಲ್ಲಲು ಅವಕಾಶವಿಲ್ಲ. ಅಧಿಕಾರಿಗಳು ಇದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಕ್ಯೂನಲ್ಲಿ ನಿಂತವರಿಗೆ ಟೋಕನ್ ನೀಡುವಂತೆ ಆಗ್ರಹಿಸಿದರು.
ಅದರಂತೆ ತಹಶೀಲ್ದಾರ್ ತಿಪ್ಪೆಸ್ವಾಮಿ ಅವರಿಗೆ ಕರೆ ಮಾಡಿ ಆಗಿರುವ ಅವ್ಯವಸ್ಥೆಗೆ ತರಾಟೆಗೆ ತೆಗೆದುಕೊಂಡರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ದೊಡ್ಡಮನಿ ಹಾಗೂ ತಾ.ಪಂ ಮೆನೇಜರ್ ಗಣೇಶ್ ಜನರಿಗೆ ಆಗುತ್ತಿರುವ ಸಮಸ್ಯೆಗೆ ಕೂಪನ್ ನೀಡಿ ಸರದಿಯಲ್ಲಿ ಬರುವಂತೆ ಮಾಡಿ ಶೀಘ್ರ ಅವರನ್ನು ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.