ಬೆಳ್ತಂಗಡಿ: ತಾನು ಮಾತ್ರ ಸುಖವಾಗಿದ್ದರೆ ಸಾಲದು, ಇತರರೂ ನೆಮ್ಮದಿಯಿಂದಿರಬೇಕು ಎಂಬುದೇ ಎಲ್ಲಾ ಧರ್ಮಗಳ ತಿರುಳು ಎಂದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಆಶ್ರಯದಲ್ಲಿ ನಿರ್ಮಾಣಗೊಂಡ ವಿನೂತನ ಶೈಲಿಯ ಭವ್ಯ ಹಾಗೂ ಸುಸಜ್ಜಿತ ಸೇಕ್ರೆಡ್ ಹಾರ್ಟ್ ಸಭಾಭವನವನ್ನು ಶನಿವಾರ ಅವರು ಉದ್ಘಾಟಿಸಿ ಆಶೀರ್ವದಿಸಿದರು.
ಉತ್ತಮ ವಸ್ತುಗಳನ್ನು ಖರೀದಿಸುವುದು, ಬಳಸುವುದು ಮಾನವನ ಸಹಜ ಮನೋವೃತ್ತಿ. ಕೃಷಿಕರ ದುಡಿತದಿಂದ ಇಂದು ನಮಗೆ ಆಹಾರ ಸಿಗುತ್ತಿದೆ ಹೀಗಾಗಿ ನಾವು ಆರೋಗ್ಯವಾಗಿದ್ದೇವೆ. ನಾವು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಸಮಾಜೋನ್ಮುಖಿ ಕಾರ್ಯಗಳಿಗೆ ಉಪಯೋಗಿಸುವುದರಿಂದ ಅಪೂರ್ವ ಕಾರ್ಯಗಳು ನಡೆಯುತ್ತವೆ. ಇಲ್ಲಿ ನಿರ್ಮಾಣಗೊಂಡ ಸಭಾಭವನವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಕಷ್ಟಗಳನ್ನು ಸಹಿಸಿಕೊಳ್ಳುವ ಗುಣ ಎಲ್ಲಾ ಧರ್ಮಗಳಲ್ಲಿ ಕಂಡು ಬರುತ್ತದೆ. ಪ್ರೇಮ, ಪ್ರೀತಿ, ದಯೆ, ಅನುಕಂಪ, ಮಾನವೀಯತೆಗಳಿಗೆ ಕ್ರಿಶ್ಚಿಯನ್ ಧರ್ಮದವರು ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದ ಅವರು ಕ್ರಿಸ್ಮಸ್ ಹಬ್ಬಕ್ಕೆ ಶುಭಾಶಯಗಳನ್ನಿತ್ತರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಲಾರೆನ್ಸ್ ಮುಕ್ಕುಯಿ ಅವರು ಡಿವೈನ್ ಗ್ರೇಸ್ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಮಾನವ ಏಕಾಂಗಿಯಲ್ಲ, ಸಮಾಜಮುಖಿಯಾಗಿದ್ದಾನೆ. ಪರಸ್ಪರ ಹೊಂದಾಣಿ, ಅನುಕೂಲತೆ, ಸಂಪರ್ಕ ಉಂಟಾಗಲು ಸಭಾಭವನ ಉಪಯೋಗವಾಗಲಿ ಎಂದರು.
ಉಸ್ತುವಾರಿ ಮಂತ್ರಿ ರಮಾನಾಥ ರೈ ಅವರು, ಧರ್ಮಕಾರ್ಯಕ್ಕೆ, ಬಡವರ ಸೇವೆಗೆ ಯಾವ ಅಡೆತಡೆಗಳು ಬಂದರೂ ಎದುರಿಸಿದಲ್ಲಿ ಯಶಸ್ಸು ಉಂಟಾಗುತ್ತದೆ. ಬಲಿದಾನದಿಂದ ಧರ್ಮ ಮುಂದುವರಿಯುತ್ತದೆ, ಮಾನವನ ಉತ್ಥಾನವಾಗುತ್ತದೆ ಎಂದ ಅವರು ಇಲ್ಲಿನ ಕಾರ್ಯಗಳಿಗೆ ಸರಕಾರದಿಂದ ಅನುದಾನಕ್ಕೆ ಪ್ರಯತ್ನಿಸಲಾಗುವ ಬಗ್ಗೆ ಆಶ್ವಾಸನೆಯಿತ್ತರು.
ಸಂಸದ ನಳೀನ್ ಕುಮಾರ್ ಕಟೀಲು ಅವರು, ಜಿಲ್ಲೆಯ ಕ್ರಿಶ್ಚಿಯನ್ ಮತಾವಲಂಬಿಗಳು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಸ್ವಚ್ಛ ಭಾರತ ಯೋಜನೆಗೆ ಬಿಷಪ್ ಅವರು ಸ್ಪಂದಿಸಿರುವುದು ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಡಾ. ಎಲೋಶಿಯಸ್ ಪೌಲ್ ಡಿ’ಸೋಜ ಅವರು ದೇವರ ವಿಶೇಷ ಅನುಗ್ರಹವಿದ್ದರೆ, ಜನರ ಸಹಕಾರವಿದ್ದರೆ ಅನುಕೂಲಕರವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು ಎಂಬುದಕ್ಕೆ ಸಭಾ ಭವನದ ನಿರ್ಮಾಣವೇ ಸಾಕ್ಷಿ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಇಲ್ಲಿ ಯಾವುದೇ ಕಾರ್ಯಗಳನ್ನು ಮಾಡಿಕೊಂಡು ಬರಬಹುದಾಗಿದೆ. ಇದರಿಂದ ಸಹಕಾರ, ಅನ್ಯೋನ್ಯತೆಯ ಬಾಳು ಸಾಧ್ಯ. ಭವನ ಪ್ರೀತಿಯ ಸಂಕೇತ ಎಂದು ಆಶೀರ್ವದಿಸಿದರು.
ರಾಜ್ಯದ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಅರುಣ್ ಫುಡ್ತಾದೋ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ವಲಯ ಪ್ರಧಾನ ಧರ್ಮಗುರು ಬೊನವೆಂಚರ್ ನಜ್ರೆತ್, ತಾ.ಪಂ. ಸದಸ್ಯರಾದ ವಸಂತಿ ಲಕ್ಷ್ಮಣ್, ಜೋಯಲ್ ಗೋಡ್ಫ್ರೀ ಮೆಂಡೋನ್ಸಾ, ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮಗುರು ಪ್ರವೀಣ್ ಡಿ’ಸೋಜ, ಸೇ.ಹಾ.ಪ.ಪೂ.ಕಾಲೇಜಿನ ಪ್ರಾಚಾರ್ಯ ಜೆರೋಮ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ರೊನಾಲ್ಡ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.
ಡಾ.ಹೆಗ್ಗಡೆಯವರನ್ನು, ಬಿಷಪ್ ರವನ್ನು ಸಮ್ಮಾನಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು. ಕಟ್ಟಡ ಕಾಮಗಾರಿಗಳಲ್ಲಿ ಪಾಲ್ಗೊಂಡವರನ್ನು ಗುರುತಿಸಲಾಯಿತು. ಸೇ.ಹಾ.ಜೂ.ಕಾಲೇಜಿನ ಉಪನ್ಯಾಸಕ ಮಧುಕರ ಮಲ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ಪ್ರಸ್ತಾವಿಸಿ ಸ್ವಾಗತಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಗ್ರೆಗರಿ ಸೇರಾ ವಂದಿಸಿದರು.
ಜಿಲ್ಲೆಯ ಅತಿ ದೊಡ್ಡ ಸಭಾಭವನ – ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇಕ್ರೆಡ್ ಹಾರ್ಟ್ ಸಭಾಭವನವು 2500 ಆಸನ ಸಾಮಥ್ರ್ಯವುಳ್ಳದ್ದಾಗಿದ್ದು, ಒಂದೇ ಬಾರಿ 2 ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ. ಕೆನಡಾ ದೇಶದಿಂದ ತರಿಸಿ ಅಳವಡಿಸಿದ 20 ಅಡಿ ಉದ್ದದ 2 ಫ್ಯಾನುಗಳು ಭವನದ ಆಕರ್ಷಣೆಯಾಗಿದೆ. ಉತ್ತಮ ಗಾಳಿ, ಬೆಳಕು, ಗಾಳಿ ಇದ್ದು ಯಾವುದೇ ಪ್ರತಿಧ್ವನಿಯಿಲ್ಲದೆ ಕಾರ್ಯಕ್ರಮಗಳನ್ನು ಯೋಗ್ಯ ರೀತಿಯಲ್ಲಿ ಮಾಡಬಹುದಾಗಿದೆ. ಎಲ್ಲಾ ಧರ್ಮದವರಿಗೂ ಇದರ ಬಳಕೆಗೆ ಅವಕಾಶವಿದ್ದು, ಉತ್ತಮ ಪಾಕಶಾಲೆಯೂ ಇದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ವಿವಿಧ ಕಾಮಗಾರಿಗಳಾದ ಸೇಕ್ರೆಡ್ ಹಾರ್ಟ್ ಕಾಲೇಜು ಮಹಾದ್ವಾರ, ಸೇಕ್ರೆಡ್ ಹಾರ್ಟ್ ವಾಣಿಜ್ಯ ಸಂಕೀರ್ಣ, ಯುಜಿಸಿ ಪ್ರಾಯೋಜಿತ 400ಮೀ. ಟ್ರಾಕ್ ನ ಕ್ರೀಡಾಂಗಣ, ಆಂಗ್ಲ ಮಾಧ್ಯಮ ಶಾಲೆಯ ಎರಡನೇ ಮಹಡಿಯ ಉದ್ಘಾಟನೆ ನೆರವೇರಿತು.
ಚರ್ಚ್ ಮುಂಭಾಗದಲ್ಲಿ ಬಿಷಪ್ ಅವರು ಏಸುವಿನ ಪವಿತ್ರ ಹೃದಯದ ಪ್ರತಿಮೆಯನ್ನು ಅನಾವರಣಗೊಳಿಸಿ ಪವಿತ್ರ ಬಲಿ ಪೂಜೆ ನೆರವೇರಿಸಿದರು.