ಸುಳ್ಯ: ಸಮಾಜಕ್ಕಾಗಿ ದುಡಿಯುವ ಯುವಕರಿಗೆ ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜಮಖಿ ಯುವ ಸಮೂಹವನ್ನು ರೂಪಿಸಲು ಯುವಜನ ಇಲಾಖೆಗೆ ಸರ್ಕಾರ ಇನ್ನಷ್ಟು ಅನುದಾನಗಳನ್ನು ನೀಡಿ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ ಒತ್ತಾಯಿಸಿದ್ದಾರೆ.
ದ.ಕ.ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ. ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಹಾಗು ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ಸುಳ್ಯದಲ್ಲಿ ನಡೆದ ಎರಡು ದಿನಗಳ ಯುವಜನ ಮೇಳ, ಯುವಜನ ಹಬ್ಬ ಮತ್ತು ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ದೇಶದ ಅಭ್ಯುದಯದ ದೃಷ್ಠಿಯಿಂದ ಯುವಕರು ಮಾಡುವ ಒಳ್ಳೆಯ ವಿಚಾರಗಳು ಬ್ರೇಕಿಂಗ್ ನ್ಯೂಸ್ ಆಗಬೇಕು, ಯಾವುದೇ ಒಳ್ಳೆಯ ಕೆಲಸಗಳಿಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದ ಅವರು ವಿಶ್ವದಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರ ನಮ್ಮದು. ಯುವಕರು ದೇಶದ ಅಭಿವೃದ್ಧಿಯ ಬೆನ್ನೆಲುಬಾಗಬೇಕು. ಅದಕ್ಕಾಗಿ ಯುವ ಜನಾಂಗ ಜಾಗೃತರಾಗಬೇಕು ಉತ್ತಮ ತರಬೇತಿಯನ್ನು ಪಡೆಯುವ ಮೂಲಕ ಕೌಶಲ್ಯವನ್ನು ಹೆಚ್ಚಿಸಬೇಕು. ಡಿಜಿಟಲ್ ಇಂಡಿಯಾ, ಕ್ಯಾಸ್ಲೆಸ್ ಸಮಾಜದಂತಹಾ ಹೊಸ ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಇತರರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿಶೇಷ ಪ್ರತಿಭೆಗಳನ್ನು ಸನ್ಮಾನಿಸಿದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ, ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಅತಿಥಿಗಳಾಗಿದ್ದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಪದಾಧಿಕಾರಿಗಳಾದ ಶಿವಪ್ರಕಾಶ್ ಅಡ್ಡನಪಾರೆ, ದಿಲೀಪ್ ಬಾಬ್ಲುಬೆಟ್ಟು, ಆರ್.ಕೆ.ಮಹಮ್ಮದ್, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭೆಗಳಾದ ಪ್ರಿಯಾಂಕಾ ಕಾಮತ್(ಕಲೆ), ಧೃತಿ ಮುಂಡೋಡಿ(ವಿಜ್ಞಾನ-ಶಿಕ್ಷಣ) ಮತ್ತು ತುಷಾರ್ ಗೌಡ(ಕಲೆ) ಅವರನ್ನು ಸನ್ಮಾನಿಸಲಾಯಿತು.