ಬಂಟ್ವಾಳ: ಬ್ರಹ್ಮರಕೂಟ್ಲು ಬಳಿ ಇರುವ ಪೆರಿಯೋಡಿ ಎಂಬಲ್ಲಿ ಕೃಷಿ ಗೋಡೌನ್ ಗೆ ಬೆಂಕಿ ವ್ಯಾಪಿಸಿ ಕೃಷಿಗೆ ಸಂಬಂಧಿಸಿದ ಹಲವು ಸೊತ್ತುಗಳು ಸುಟ್ಟು ಭಸ್ಮವಾಗಿದೆ.
ಸೋಮನಾಥ ಮತ್ತು ಶ್ರೀಧರ ಎಂಬ ಸಹೋದರರು ವಾಸಿಸುವ ಮನೆ ಪಕ್ಕದಲ್ಲೇ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಇಡುವ ಕೊಟ್ಟಿಗೆ ಗೋಡೌನ್ ಇದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಮಡ್ಡಿ ಮಾಡಲು ಬೇಯಿಸಿ ಹೊರಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಕೊಟ್ಟಿಗೆಗೆ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಗೋಡೌನಿಗೆ ಬೆಂಕಿ ಹರಡಿದೆ. ಕೂಡಲೇ ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಬಹುಪಾಲು ಕೊಟ್ಟಿಗೆ ಭಸ್ಮವಾಗಿತ್ತು. ಕೊಟ್ಟಿಗೆಯಲ್ಲಿಟ್ಟ ಬೈಹುಲ್ಲು, ಕೃಷಿಗೆ ಬೇಕಾದ ಸಲಕರಣೆಗಳ ಸಹಿತ ಹಲವು ಸೊತ್ತುಗಳು ಬೆಂಕಿಯಿಂದ ಸುಟ್ಟುಹೋಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.