ಮಂಗಳೂರು: ನಿರ್ಮಲ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಯಲ್ಲಿ ಮಳೆನೀರು ಕೊಯ್ಲು ಹಾಗೂ ಜಲಮೂಲ ಅಭಿವೃದ್ದಿಪಡಿಸಿ, ಪರಿಸರ ಸಂರಕ್ಷಿಸುವುದೇ ಈ ವರ್ಷದ ಕ್ರಿಸ್ಮಸ್ ಆಚರಣೆಯ ಮುಖ್ಯ ಸಂದೇಶವಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ಅವರು ಬಿಷಪ್ ಹೌಸ್ ನಲ್ಲಿ ಶುಕ್ರವಾರ ನಡೆದ ಕ್ರಿಸ್ಮಸ್ ಸೌಹಾರ್ದಕೂಟ ಹಾಗೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಅವರು ಸೌಹಾರ್ದಕೂಟಕ್ಕೆ ಚಾಲನೆ ನೀಡಿದು. ಮುಂದಿನ ದಿನಗಳಲ್ಲಿ ಧರ್ಮ ಪ್ರಾಂತ್ಯಕ್ಕೆ ಸಂಬಂಧಿಸಿದ ಎಲ್ಲ ಚರ್ಚ್ ಹಾಗೂ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿ ಮಳೆ ನೀರು ಇಂಗಿಸುವ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದರು.
ಏಸುಕ್ರಿಸ್ತರು ಜೆರುಸಲೆಂ ನಗರದ ಬೆತ್ಲೆಹೆಮ್ ಎಂಬ ಪುಟ್ಟ ಹಳ್ಳಿಯಲ್ಲಿ ದನದ ಕೊಟ್ಟಿಗೆಯಲ್ಲಿ ಜನಿಸಿದ್ದರು. ಹಳ್ಳಿಯ ಪರಿಸರ, ನಿರ್ಮಲ ವಾತವರಣದಲ್ಲಿ ಬೆಳೆದ ಏಸುಕ್ರಿಸ್ತರು ಜನರ ಅಂತರಂಗ ಹಾಗೂ ಬಹಿರಂಗದ ಜೀವನದಲ್ಲಿ ನಿರ್ಮಲತೆ, ಪರಿಶುದ್ಧತೆ ಬೆಳೆಸಲು ಬೋಧಿಸಿದ್ದರು. ಅದರಂತೆ ಉತ್ತಮ ಪರಿಸರ ನಿರ್ಮಾಣಕ್ಕೆ ಧರ್ಮಪ್ರಾಂತ್ಯ ಹೆಚ್ಚಿನ ಪ್ರೋತ್ಸಹ ನೀಡುತ್ತಿದೆ. ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಎಲ್ಲ ಚರ್ಚ್ ಗಳಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪ್ರಧಾನ ಗುರು ಮೋನ್ಸಿಂಜೋರ್ ಡೆನಿಮ್ ಮೊರಾಸ್ ಪ್ರಭು, ಪಾಲನಾ ಸಮಿತಿ ಕಾರ್ಯದರ್ಶಿ ಮಾರ್ಸೆಲ್ ಮೊಂತೆರೋ, ಛಾನ್ಸ್ ಲರ್ ಹೆನ್ರಿ ಸಿಕ್ವೇರಾ ಉಪಸ್ಥಿತರಿದ್ದರು.