ಕಾರ್ಕಳ: ಮನೆಯ ಕಂಪೌಂಡ್ನೊಳಗೆ ಅಕ್ರಮವಾಗಿ ಪ್ರವೇಶಗೈದು ಮಾರಾಕಾಯುಧಗಳನ್ನು ಹಿಡಿದುಕೊಂಡು ಬಜರಂಗದಳ ಕಾರ್ಕಳ ನಗರದ ಮಾಜಿ ಸಂಚಾಲಕ ತೆಳ್ಳಾರು ರಸ್ತೆ ನಿವಾಸಿ ಅನಿಲ್ ಪ್ರಭು(40) ಎಂಬವರಿಗೆ ಜೀವಬೆದರಿಕೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕುಂಬ್ರಪದವುವಿನ ಇರ್ಫಾನ್, ತೆಳ್ಳಾರು 12ನೇ ರಸ್ತೆಯ ದೀಪಕ್ ಆಚಾರಿ ಪ್ರಕರಣದ ಆರೋಪಿತರಾಗಿದ್ದು, ಘಟನೆ ನಡೆದ ಕೆಲ ಹೊತ್ತಿನಲ್ಲಿ ಆರೋಪಿಗಗಳಿಬ್ಬರನ್ನು ನಗರಠಾಣಾಧಿಕಾರಿ ರವಿ ಅವರು ಬಂಧಿಸಿದ್ದಾರೆ. ಆರೋಪಿತರು ಯಾವುದೋ ಕೃತ್ಯ ಎಸಗುವ ನಿಟ್ಟಿನಲ್ಲಿ ಮಾರಾಕಾಯುಧಗಳೊಂದಿಗೆ ಮನೆಯ ಕಂಪೌಂಡ್ ಗಳೊಳಗೆ ಅಕ್ರಮವಾಗಿ ಪ್ರವೇಶಿಸಿ ಜೀವಬೆದರಿಕೆ ಯೊಡ್ಡಿದ್ದರು. ಆ ಸಂದರ್ಭದಲ್ಲಿ ಇತ್ತಂಡದೊಳಗೆ ಮಾತಿನ ವಾಗ್ವಾದ ಉಂಟಾಗಿರುವುದರಿಂದ ನೆರೆಮನೆಯವರು ಸೇರುತ್ತಿದ್ದಂತೆ ಆರೋಪಿತರು ಆಗಮಿಸಿದ ಬೈಕ್ಗಳಲ್ಲಿ ಪರಾರಿಯಾಗಿದ್ದರು.
ಅನಿಲ್ ಪ್ರಭು ಬಜರಂಗದಳ ಸಂಘಟನೆಯ ನಗರ ಸಂಚಾಲಕರಾಗಿದ್ದ ಅವಧಿಯಲ್ಲಿ ಅಕ್ರಮ ಅಕ್ರಮ ಕಸಾಯಿಖಾನೆಗಳ ಸಹಿತ ನಾನಾ ತರದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹಲವಾರು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದರು.ಈ ಎಲ್ಲಾ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿ ತನಿಖೆ ಮುಂದುವರಿಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಬಿಗು ಪಹರೆ ಏರ್ಪಡಿಸಿದರಲ್ಲದೇ ಪ್ರಕರಣದ ಆರೋಪಿಗಳಾದ ಇರ್ಫಾನ್, ದೀಪಕ್ ಆಚಾರಿ ಅವರಿಬ್ಬರನ್ನು ಬಂಧಿಸಿ, ಬೈಕ್ ಗಳೆರಡನ್ನು ವಶಪಡಿಸಿದ್ದಾರೆ.