ಕಾಸರಗೋಡು: ನೋಟು ಅಮಾನ್ಯಗೊಳಿಸಿದ ಹಿನ್ನಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರಕಾರದ ವಿಫಲಗೊಂಡಿರುವ ಹಾಗೂ ಸಹಕಾರಿ ವಲಯದ ನಾಶಕ್ಕೆ ನಡೆಸುತ್ತಿರುವ ಹುನ್ನಾರವನ್ನು ಪ್ರತಿಭಟಿಸಿ ಸಿಪಿಐಎಂ ನೇತೃತ್ವದ ಎಲ್ ಡಿಎಫ್ ಕಾಸರಗೋಡಿನಿಂದ ತಿರುವನಂತಪುರ ತನಕ ಮಾನವ ಸರಪಳಿ ನಡೆಯಿತು.
ಲಕ್ಷಾಂತರ ಮಂದಿ ಕೈ ಜೋಡಿಸಿದರು. ಕಾಸರಗೋಡು ಹೊಸ ಬಸ್ಸು ನಿಲ್ದಾಣ ಸಮೀಪ ಸರಪಳಿಗೆ ಮೊದಲಿಗೆ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಕೈಜೋಡಿಸಿದರೆ ತಿರುವನಂತಪುರದಲ್ಲಿ ಕೊನೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಜೋಡಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 47 ಕಿ.ಮೀ ಸೇರಿದಂತೆ 700 ಕಿ.ಮೀ ಉದ್ದದ ಮಾನವ ಸರಪಳಿ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿತು.
ಸಂಜೆ 5 ಗಂಟೆಗೆ ಪರಸ್ಪರ ಕೈ ಜೋಡಿಸುವ ಮೂಲಕ ಪ್ರತಿಜ್ಞೆ ಕೈಗೊಂಡರು. ನಿರೀಕ್ಷೆಗೂ ಮೀರಿ ಜನರು ಸರಪಳಿಗೆ ಕೈ ಜೋಡಿಸಿದ್ದರು.
ಕಾಸರಗೋಡಿನಲ್ಲಿ ಸಚಿವ ಇ. ಚಂದ್ರಶೇಖರನ್ ಅಲ್ಲದೆ ಸಂಸದ ಪಿ. ಕರುಣಾಕರನ್, ಕೆ .ಪಿ ಸತೀಶ್ಚಂದ್ರನ್, ಸಿ. ಎಚ್ ಕುಞ೦ಬು, ಬಿ. ವಿ ರಾಜನ್, ಎಸ್. ಜೆ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಪ್ರಮುಖ ಕೇಂದ್ರಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.