ಉಳ್ಳಾಲ: ಕೊಣಾಜೆಯ ಕಾರ್ತಿಕ್ ರಾಜ್ ಹತ್ಯೆ ನಡೆದು ಎರಡು ತಿಂಗಳಾದರೂ ಆರೋಪಿಗಳನ್ನು ಪತ್ತೆಹಚ್ಚದ ಪೊಲೀಸರ ವಿರುದ್ಧ ಹಾಗೂ ಹಿಂದುಗಳಿಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಉಳ್ಳಾಲ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಜ.1 ರಂದು ಬೆಳಿಗ್ಗೆ 8 ಗಂಟೆಗೆ ಕೊಣಾಜೆ ಪೊಲೀಸ್ ಠಾಣೆ ಎದುರು ಮೌನ ಪ್ರತಿಭಟನೆ ನಡೆಯಲಿದೆ.
ಪಜೀರು ಸುದರ್ಶನನಗರದ ಶ್ರೀ ಕೃಷ್ಣ ಭಜನಾ ಮಂದಿರದಿಂದ ಕೊಣಾಜೆ ಠಾಣೆಯವರೆಗೆ ಪ್ರತಿಭಟನಾ ಜಾಥಾ ನಡೆಯಲಿದೆ. ಪ್ರತಿಭಟನೆಯಲ್ಲಿ ಪಜೀರು ಗ್ರಾಮದವರೆಲ್ಲರೂ ಸೇರಲಿದ್ದು, ಆರೋಪಿಗಳ ಪತ್ತೆಗೆ ಆಗ್ರಹಿಸಲಿದ್ದಾರೆ. ಹೆಲ್ಮೆಟ್ ಧರಿಸದೆ ತೆರಳುವ ದ್ವಿಚಕ್ರ ವಾಹನ ಸವಾರರನ್ನೇ ಹಿಡಿಯುತ್ತಿರುವ ಪೊಲೀಸರು ಕೊಲೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ಇಂತಹ ಧೋರಣೆ ನೀತಿ ಅನುಸರಿಸುತ್ತಿರುವ ಪೊಲೀಸರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಿಒಡಿ ತನಿಖೆಗೆ ಯು.ಟಿ.ಖಾದರ್ : ಪಜೀರು ಗ್ರಾಮದ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ರೀತಿಯಲ್ಲಿ ತನಿಖೆ ನಡೆಸಿದರೂ ಇಲ್ಲಿಯವರೆಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಒಡಿಗೆ ವಹಿಸುವ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚಿಸುವುದಾಗಿ ಆಹಾರ ಸಚಿವ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಬುಧವಾರ ಪಜೀರು ಗ್ರಾಮದ ಕೊಲೆಯಾದ ಕಾರ್ತಿಕ್ ರಾಜ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಕಾರ್ತಿಕ್ ರಾಜ್ ದುಷ್ಕರ್ಮಿಗಳಿಂದ ಕೊಲೆಗೀಡಾಗಿ ಎರಡು ತಿಂಗಳಾದರೂ ಇಲ್ಲಿಯವರೆಗೂ ಆರೋಪಿಗಳ ಸುಳಿವು ಲಭಿಸಿಲ್ಲ ಮಾತ್ರವಲ್ಲದೆ ಕುಟುಂಬಕ್ಕೂ ನ್ಯಾಯ ಸಿಕ್ಕಿಲ್ಲ. ಪೊಲೀಸರು ಬೇರೆ ಬೇರೆ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ಆದರೂ ಇಷ್ಟು ದಿನವಾದರೂ ಯಾವುದೇ ಅಪರಾಧಿಗಳ ಪತ್ತೆಯಾಗಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದಾರೆ ಆದರೂ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆಹಚ್ಚುವುದಕ್ಕಾಗಿ ಈ ಪ್ರಕರಣವನ್ನು ಸಿಒಡಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.
ಅಕ್ಟೊಬರ್ 22ರಂದು ಮುಂಜಾನೆ ಪಜೀರು ಗ್ರಾಮದ ಉಮೇಶ್ ಅವರ ಪುತ್ರ ಕಾರ್ತಿಕ್ ರಾಜ್ ವಾಯುವಿಹಾರಕ್ಕೆ ತೆರಳುತ್ತಿದ್ದ ವೇಳೆ ಕೊಣಾಜೆ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ನಡೆಸಿದ್ದರು. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ವಿವಿಧ ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದರೂ ಇಷ್ಟವರೆಗೂ ಯಾವುದೇ ಸುಳಿವು ದೊರೆತಿಲ್ಲ.
ಪ್ರತಿಭಟನೆ: ಈ ನಡುವೆ ಕೊಲೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗದೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪಜೀರು ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಜ.1ರಂದು ಕೊಣಾಜೆ ಠಾಣೆಯೆದುರು ಪ್ರತಿಭಟನೆ ನಡೆಸುವ ನಿರ್ಧಾರವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.