ಉಳ್ಳಾಲ: ಹತ್ತು ದಿನಗಳಲ್ಲಿ ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು ಬಂಧಿಸದೆ, ಹಿಂದುಗಳಿಗೆ ರಕ್ಷಣೆಯನ್ನು ನೀಡಲು ವಿಫಲವಾದಲ್ಲಿ `ಜಿಲ್ಲೆಗೆ ಬೆಂಕಿ ಹಾಕಲು ಸಿದ್ಧ’ ಎಂದು ಆಕ್ರೋಶ ಭರಿತ ಮಾತುಗಳನ್ನಾಡಿದವರು ಸಂಸದ ನಳಿನ್ ಕುಮಾರ್ ಕಟೀಲ್.
ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗ ಅವರ ಪುತ್ರ ಕಾರ್ತಿಕ್ ರಾಜ್ ಆರೋಪಿಗಳ ಪತ್ತೆಗೆ ಆಗ್ರಹಿಸಿ ಭಾನುವಾರ ಬೆಳಿಗ್ಗೆ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಪಜೀರು ಸುದರ್ಶನ ನಗರದಿಂದ ಕೊಣಾಜೆ ಠಾಣೆಯವರೆಗೆ ನಡೆದ ಮೌನ ಜಾಥಾ ಹಾಗೂ ಠಾಣೆಯೆದರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಹಿಂದುಗಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಉಳ್ಳಾಲದಲ್ಲಿ ನಡೆಯುತ್ತಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಇದನ್ನು ಪ್ರಶ್ನಿಸಲು ಕೇಂದ್ರದ ಗೃಹ ಇಲಾಖೆಯಿಂದ ಸಾಧ್ಯ. ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯೂ ಇಲ್ಲ. ಕೇರಳದಿಂದ ಬರುವ ಭಯೋತ್ಪಾದಕರಿಂದ ಇಂತಹ ಕೃತ್ಯ ನಡೆಯುತ್ತಿದೆ. ಗಡಿ ಪ್ರದೇಶವಾಗಿರುವುದರಿಂದ ಸುಲಭವಾಗಿ ನುಸುಳಿ ಕೃತ್ಯ ಎಸಗುತ್ತಿದ್ದಾರೆ. ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳಿಗೆ ಈ ಭಾಗದ ಶಾಸಕರೇ ನೇರ ಹೊಣೆಯಾಗಿದ್ದಾರೆ.
ಹಿಂದು ಅಪರಾಧ ಎಸಗಿದನೆಂದೇ ಆದಲ್ಲಿ ಆತನ ಹೆತ್ತವರನ್ನೇ ಪೊಲೀಸರು ತಂದು ಠಾಣೆಯಲ್ಲಿರಿಸುತ್ತಾರೆ. ಜಾತ್ರಾ ಸಮಯದಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿ ಬಂಧಿಸುವ ಪೊಲೀಸರು, ಕೊಲೆ ಆರೋಪಿಗಳನ್ನು ಬಂಧಿಸದೇ ಇರುವುದು ವಿಪರ್ಯಾಸ. ಒಂದು ವರ್ಷದಿಂದ ನಡೆದಿರುವ ಘಟನೆಯ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು, ಅವರ ಮೇಲಿನ ಒತ್ತಡವನ್ನು ತೋರಿಸುತ್ತಿದೆ.
ಶೃಂಗೇರಿಯಲ್ಲಿ ಜಾನುವಾರು ಕಳವುಗೈಯ್ಯುವ ಸಂದರ್ಭ ಹತ್ಯೆಗೀಡಾದವನಿಗೆ ರೂ.20 ಲಕ್ಷ ಪರಿಹಾರ ನೀಡುವ ಸರಕಾರ, ಕಾರ್ತಿಕ್ ರಾಜ್ ಬಗ್ಗೆ ಮಾಹಿತಿಯನ್ನು ಅರಿಯದೇ ಆರೋಪಿಗಳನ್ನು ಪತ್ತೆಹಚ್ಚಿಸುವಲ್ಲಿ ವಿಫಲವಾಗಿದೆ. ಇಂತಹ ರಾಜ್ಯಸರಕಾರ ವಿಶ್ವಾಸವೇ ಇಲ್ಲದಂತಾಗಿದೆ. 10 ದಿನಗಳಲ್ಲಿ ಆರೋಪಿಗಳ ಪತ್ತೆಯಾಗದೇ ಇದ್ದಲ್ಲಿ, ಠಾಣೆಯೆದರು ಧರಣಿ ನಡೆಸುವುದು ಶತ ಸಿದ್ಧ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಮಾಜಿ ಶಾಸಕ ಜಯರಾಮ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೀತಾರಾಮ ಶೆಟ್ಟಿ, ಸೇಸಪ್ಪ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.