ಬಂಟ್ವಾಳ: ಕತ್ತರಿ ಹರಿತಮಾಡುವ ನೆಪದಲ್ಲಿ ಮನೆಮನೆಗೆ ತೆರಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ಲತೀಫ್(22) ಬಂಧಿತ ಆರೋಪಿ.
ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಿಡೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನು ಕತ್ತರಿ ಹರಿತ ಮಾಡುತ್ತಾ ಮನೆಮನೆಗೆ ತಿರುಗುತ್ತಿದ್ದು, ಗ್ರಾಮಾಂತರ ಪ್ರದೇಶದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಕ್ಷಿತ್ ಗೌಡ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಆತನ ಮೇಲೆ ಅನುಮಾನ ಉಂಟಾಗಿ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗದೀಶ್, ಸುರೇಶ್, ಮಾಧವ, ಜನಾರ್ದನ್, ಪ್ರವೀಣ್, ಪುನೀತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.