ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಡಾರು ಕಂದೊಟ್ಟು ಪರಿಸರದ ದಲಿತ ನಿವಾಸಿಗಳ ಮನೆಗಳಿಗೆ ಈ ಹಿಂದೆ ಕಲ್ಪಿಸಲಾಗಿರುವ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯಿತಿಯವರು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ, ಇರುವೈಲು ಗ್ರಾಮ ಪಂಚಾಯಿತಿ ಕಚೇರಿ ಎದುರು ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು.
ದ.ಕ ಜಿಲ್ಲೆ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂತ್ರಸ್ತ 13 ಕುಟುಂಬಗಳ ಸದಸ್ಯರು ಭಾಗವಹಿಸಿ, ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಲಿಂಗಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿ, ಸುಮಾರು 35 ವರ್ಷಗಳ ಹಿಂದೆ ಕಂದೋಟ್ಟು ಪರಿಸರದಲ್ಲಿ ವಾಸವಾಗಿರುವ 13 ಕುಟುಂಬಗಳಿಗೆ ಏಳು ವರ್ಷಗಳ ಹಿಂದೆ ಅಂದಿನ ಹೊಸಬೆಟ್ಟು ಗ್ರಾ.ಪಂ ಕುಡಿಯುವ ನೀರಿನ ವ್ಯವಸ್ಥೆಗೆ ನಳ್ಳಿಯನ್ನು ಅಳವಡಿಸಿತ್ತು. ಇದೀಗ ಈ ಪ್ರದೇಶವು ಇರುವೈಲು ಪಂಚಾಯಿತಿಗೆ ವ್ಯಾಪ್ತಿಗೊಳ್ಳಪಟ್ಟಿದ್ದು, ಪಂಚಾಯಿತಿಯವರು ಕಳೆದ 10 ದಿನಗಳ ಹಿಂದೆ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳು ನೀರಿನ ಶುಲ್ಕ 1 ಸಾವಿರ ಹಾಗೂ 1 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ಸಮಿತಿಯ ವತಿಯಿಂದ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದೂರದ ಬಾವಿಯೊಂದರಿಂದ ಪ್ರತಿದಿನವೂ ನೀರು ತರುವ ಅನಿವಾರ್ಯತೆ ಇಲ್ಲಿನ ಜನರಿಗಿದೆ. ಈ ಕುರಿತು ಮೂಡುಬಿದಿರೆ ತಹಸೀಲ್ದಾರ್, ಮೂಡುಬಿದಿರೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ. ಆದರೆ ಪಂಚಾಯಿತಿಯು ಸೂಕ್ತ ಸ್ಪಂದನೆ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ಎಸ್ಸಿ,ಎಸ್ಟಿ ಅನುದಾನವನ್ನೂ ಕೂಡ ಬಳಕೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ, ದ.ಕ ಜಿಲ್ಲಾಧಿಕಾರಿ, ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರು, ಪರಿಶಿಷ್ಟ ಜಾತಿ, ಪಂಗಡಗಳ ಆಯೋಗಕ್ಕೂ ದಲಿತ ಹಕ್ಕುಗಳ ಸಮಿತಿಯಿಂದ ದೂರು ಸಲ್ಲಿಸಲಾಗಿದೆ. ದಲಿತ ಹಕ್ಕುಗಳ ಸಮಿತಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ವಾಲ್ಪಾಡಿ, ಕಾರ್ಯದಶರ್ಿ ಕೃಷ್ಣಪ್ಪ, ಸಂಚಾಲಕಿ ಗಿರಿಜಾ ಉಪಸ್ಥಿತರಿದ್ದರು.
ದಲಿತ ನಿಧಿ ಬಳಕೆಯಿಲ್ಲ!:
ದಲಿತರ ಮೀಸಲು ನಿಧಿಯಡಿಯಲ್ಲಿ 2015-16ನೇ ಸಾಲಿನಲ್ಲಿ ವಿನಿಯೋಗಿಸಲ್ಪಟ್ಟ ನಿಧಿಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ದಲಿತ ಮುಖಂಡರು ಮಾಹಿತಿ ಕೇಳಿದ್ದು, ಯಾವುದೇ ರೀತಿಯ ಅನುದಾನ ಬಳಕೆ ಮಾಡದಿರುವುದು ಮಾಹಿತಿ ಬಂದಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಹಕ್ಕುಗಳ ಸಮಿತಿ ಬೇಜವಾಬ್ದಾರಿತನ ತೋರಿಸಿರುವ ಪಿಡಿಒ ಯಶವಂತ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ.