ಕಾಸರಗೋಡು: ಏಷ್ಯನ್ ಜೂನಿಯರ್ ತ್ರೋ ಬಾಲ್ ಚಾ೦ಪ್ಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ತಂಡದ ಆಟಗಾರ್ತಿಯಾಗಿರುವ ಕಾಸರಗೋಡಿನ ಕುವರಿಗೆ ಸ್ವಂತ ಮನೆಯಿಲ್ಲ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ತ್ರೋ ಬಾಲ್ ನ ಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಭಾರತೀಯರಲ್ಲಿ ಬದಿಯಡ್ಕ ಕುಂಬ್ಡಾಜೆ ಬೆಳ್ಳೂರು ಮಿತ್ತಮಜಲು ಎಂಬ ಕುಗ್ರಾಮದಿಂದ ಬೆಳೆದು ಬಂದ ರಾಷ್ಟ್ರೀಯ ಪ್ರತಿಭೆ ಯಸ್ಮಿತಾ.
ಈಕೆಯ ಸಾಧನೆ ಭಾರತ ದೇಶಕ್ಕೆ ಹೆಮ್ಮೆ ತಂದಿತ್ತಾದರೂ ಈಕೆಗೆ ಸ್ವಂತ ಸೂರಿಲ್ಲ. ಸ್ವಂತ ಮನೆ , ಮೂಲಭೂತ ಸೌಲಭ್ಯ, ಆರ್ಥಿಕ ಅಡಚಣೆ ಜೊತೆಗೆ ಸಾಲಗೀಲ ಮಾಡಿ ಎಲ್ಲವನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದವಳು ಯಸ್ಮಿತಾ. ಯಸ್ಮಿತಾಳ ಕುಟುಂಬಕ್ಕೆ ಸ್ವಂತ ಮನೆ ಇಲ್ಲ. ಚಿಕ್ಕಪ್ಪನ ಮನೆಯಲ್ಲಿ ಇದೀಗ ವಾಸವಾಗಿದ್ದಾರೆ. ಮನೆಗೆ ಧನಸಹಾಯಕ್ಕಾಗಿ ಸ್ಥಳೀಯ ಕುಂಬ್ಡಾಜೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಮಂಜೂರಾಗಿಲ್ಲ . ಕುಡಿಯುವ ನೀರಿನ ಸಮಸ್ಯೆಯೂ ಕುಟುಂಬವನ್ನು ಕಾಡುತ್ತಿದೆ.
ಗ್ರಾಮೀಣ ಶಾಲೆಯೊಂದರ ಮೈದಾನದಲ್ಲಿ ತನ್ನ ಛಲದಿಂದಲೇ ಬೆಳೆದು ಇದೀಗ ರಾಷ್ಟ್ರ ಮಟ್ಟವನ್ನು ಪ್ರತಿನಿಧೀಕರಿಸಿ ಚಿನ್ನ ಗೆದ್ದಿದ್ದಾಳೆ. ಕಾಸರಗೋಡು ಜಿಲ್ಲೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ತನ್ನ ಸಾಧನೆಯನ್ನು ಮುಂದಿಟ್ಟು ಕೀರ್ತಿ ತಂಡ ಯಸ್ಮಿತಾಳ ಕುಟುಂಬದ ಬದುಕು ತೀರಾ ಬಡತನದ್ದು , ಸಂಬಂಧಿಕರೊಬ್ಬರ ಮನೆಯಲ್ಲಿ ಯಸ್ಮಿತಾಳ ಕುಟುಂಬ ವಾಸಿಸುತ್ತಿದೆ.
ತಂದೆ ಸುಬ್ಬಣ್ಣ ನಾಯ್ಕ್ ಕೂಲಿ ಕಾರ್ಮಿಕರಾಗಿದ್ದರೆ. ತೀರಾ ಬಡತನ ಜೊತೆಗೆ ಸ್ವಂತ ಮನೆ ಇಲ್ಲದಿದ್ದರೂ ಕ್ರೀಡೆಯ ಮೂಲಕ ಯಸ್ಮಿತಾ ಕೀರ್ತಿ ತಂದುಕೊಟ್ಟಿದ್ದಾಳೆ. ದೇಶವನ್ನು ಪ್ರತಿನಿಧೀಕರಿಸಿದ್ದರೂ ಈಕೆಗೆ ಸರಕಾರದಿಂದ ಯಾವುದೇ ಸವಲತ್ತು ಲಭಿಸಿಲ್ಲ . ಶಾಲಾ ವಿದ್ಯಾರ್ಥಿಗಳು , ಶಿಕ್ಷಕರು, ಪೋಷಕರು , ಸಂಬಂಧಿಕರು ಒಟ್ಟುಗೂಡಿಸಿದ ಹಣ, ಪ್ರೋತ್ಸಾಹ , ಬೆಂಬಲ ಹಾಗೂ ಸಾಲ ಮಾಡಿ ಯಸ್ಮಿತಾ ಚಾಂಪಿಯನ್ ಶಿಪ್ ಗೆ ತೆರಳಿದ್ದು , ಎಲ್ಲಾ ಸಂಕಷ್ಟವನ್ನು ಮರೆತು ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾಳೆ . ತ್ರೋ ಬಾಲ್ ಚಾ೦ಪ್ಯನ್ ಶಿಪ್ ನಲ್ಲಿ ಭಾಗವಹಿಸಲು ಯಸ್ಮಿತಾಳಿಗೆ 60 ಸಾವಿರ ರೂ . ವೆಚ್ಚವಾಗಿದೆ. ಈ ಪೈಕಿ 32 ಸಾವಿರ ರೂ. ಸಂಗ್ರಹ ವಾಗಿದೆ. ಜೆರ್ಸಿಯನ್ನು ಸ್ವಂತ ಹಣದಿಂದ ಖರೀದಿಸಿದ್ದರು.
ಚಿಕ್ಕಂದಿನಿಂದಲೇ ಯಸ್ಮಿತಾಳಿಗೆ ಕ್ರೀಡೆಯಲ್ಲಿ ಆಸಕ್ತಿ. ಆದರೆ ಪ್ರೋತ್ಸಾಹ ನೀಡುವವರು ಯಾರು ಇರಲಿಲ್ಲ. ಈಗ ಬದಿಯಡ್ಕ ಸಮೀಪದ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲಾ ಪ್ಲಸ್ ವನ್ ವಿದ್ಯಾರ್ಥಿಯಾಗಿರುವ ಯಶ್ಮಿತಾ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು ಮಾತ್ರವಲ್ಲ ಶಾಲಾ ಮಟ್ಟದಲ್ಲಿ ಉತ್ತಮ ಹೆಸರು ಪಡೆದುಕೊಂಡಿದ್ದಳು. ಇದನ್ನು ಗುರುತಿಸಿದ ಶಾಲಾ ಕ್ರೀಡಾ ಅಧ್ಯಾಪಕ ಶಶಿಕಾಂತ್ ಬಲ್ಲಾಳ್ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಬೆಳೆಯಲು ಅವಕಾಶ ಮಾಡಿಕೊಟ್ಟರು . ಶಾಲಾ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ಈಕೆ ಬಳಿಕ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಳು . ಟೆನ್ನಿಸ್, ಶಟಲ್ , ಬ್ಯಾಡ್ಮಿಂಟನ್ ನಲ್ಲೂ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾಳೆ.
ಜಿಲ್ಲೆಯಲ್ಲಿ ಕ್ರೀಡಾ ತರಬೇತಿಗೆ ಅಗತ್ಯ ಸೌಕರ್ಯಗಳಿಲ್ಲ . ಆದರೂ ಶಾಲಾ ಮೈದಾನದಲ್ಲಿ ಎಲ್ಲಾ ಪರಿಮಿತಿಗಳನ್ನು ಮೀರಿ ಅಂತಾರಾಷ್ಟ್ರೀಯ ಕ್ರೀಡಾ ಪುಟಗಳಲ್ಲಿ ಮಿಂಚಿ ದ್ದಾಳೆ ಭಾರತವನ್ನು ಪ್ರತಿನಿಧೀಕರಿಸಿದ್ದವರಲ್ಲಿ ಯಸ್ಮಿತಾ ಅಲ್ಲದೆ ಕೇರಳದ ಇತರ ಮೂವರು , ಉಳಿದವರು ತಮಿಳುನಾಡು , ತೆಲಂಗಾಣ ಮೊದಲಾದ ರಾಜ್ಯದವರು.
ದೇಶಕ್ಕೆ ಕೀರ್ತಿ ತಂಡ ಯಸ್ಮಿತಾಲ್ ಕುಟುಂಬಕ್ಕೆ ಸೂಕ್ತ ಸೂರು , ಕ್ರೀಡಾ ತರಬೇತಿ , ಸಬಲತ್ತುಗಳು ಲಭಿಸಬೇಕಿದೆ. ಕ್ರೀಡೆಯಲ್ಲಿ ತೀರಾ ಹಿಂದೆ ಉಳಿದಿರುವ ಕಾಸರಗೋಡು ಜಿಲ್ಲೆಗೆ ಯಸ್ಮಿತಾಳ ಸಾಧನೆ ಹೊಸ ಆಶಾಕಿರಣ ಮೂಡಿಸಿದ್ದು , ಬೆಳೆಯುತ್ತಿರುವ ಆಟಗಾರರಿಗೆ ಬೆಳಕಾಗಿದೆ
ಮುಂದಿನ ಕನಸು ಒಲಿಂಪಿಕ್ಸ್
ತ್ರೋಬಾಲ್ ನಲ್ಲಿ ಪಾಕಿಸ್ತಾನವನ್ನು ಬಗ್ಗುಪಡಿದು ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಯಸ್ಮಿತಾಳ ಮುಂದಿನ ಕನಸು ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕೆಂಬುದು. ಇದಕ್ಕಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದು, ಸೂಕ್ತ ತರಬೇತಿ, ಪ್ರೋತ್ಸಾಹ, ಆರ್ಥಿಕ ಮುಗ್ಗಟ್ಟು, ಸೌಲಭ್ಯಗಳನ್ನು ಈಕೆಯನ್ನು ಕಾಡುತ್ತಿದೆ. ಗ್ರಾಮೀಣ ಶಾಲೆಯ ಪ್ರತಿಭೆಯನ್ನು ಗುರುತಿಸುವಲ್ಲಿ ಸರಕಾರ ಕೂಡಾ ಮುಂದೆ ಬಂದಿಲ್ಲ
ಯಸ್ಮಿತಾಳ ಕುಟುಂಬಕ್ಕೆ ಮನೆ ಮಂಜೂರುಗೊಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ರಾಜ್ಯ ಕ್ರೀಡಾ ಸಚಿವರ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಾಸರಗೋಡಿನ ಯಸ್ಮಿತಾ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾಳೆ . ಅಗತ್ಯ ಇರುವ ಎಲ್ಲಾ ಸಹಾಯ ನೀಡುವ ಬಗ್ಗೆ ಪ್ರಯತ್ನ – ಶಾಸಕ ಎನ್. ಎ ನೆಲ್ಲಿಕುನ್ನು