ಮೂಡುಬಿದಿರೆ: ಛತ್ತೀಸ್ಗಡ ಸಾಂಪ್ರಾದಾಯಿಕ ಲೋಹ ಶಿಲ್ಪದಲ್ಲಿ ಅರಳುತ್ತಿರುವ ತುಳುನಾಡಿನ ಭೂತರಾಧನೆ, ಸಂಪ್ರದಾಯ ಮರ ಕತ್ತನೆಯಲ್ಲಿ ನಾಜೂಕಾಗಿ ಮೂಡಿಬರುತ್ತಿರುವ ಪ್ರತಿಮೆ. ಇದು ಆಳ್ವಾಸ್ ಶಿಲ್ಪ ವಿರಾಸತ್ 2017.
ಇದೇ ಮೊದಲ ಬಾರಿಗೆ ಶಿಲ್ಪ ವಿರಾಸತ್ ನಲ್ಲಿ ಮರದ ಕೆತ್ತನೆ ಹಾಗೂ ಲೋಹದ ಕಲಾಕೃತಿಗಳು ಮೂಡಿಬರುತ್ತಿದ್ದು, ಶಿಬಿರ ನಡೆಯುತ್ತಿರುವ ವಿದ್ಯಾಗಿರಿಯ ನುಡಿಸಿರಿ ಸಭಾಂಗಣ ಆಕರ್ಷಣೆಯ ಕೇಂದ್ರವಾಗಿದೆ. ಆಳ್ವಾಸ್ ಶಿಲ್ಪ ವಿರಾಸತ್ 2017 ರಾಷ್ಟ್ರೀಯ ಕಲಾ ಶಿಬಿರದಲ್ಲಿ 13 ಕಲಾವಿದರ ಸಂಗಮದಲ್ಲಿ ಶಿಲ್ಪಗಳು ಅರಳುತ್ತಿದೆ. ಹಿರಿಯ ಕಲಾವಿದ ರಾಮಮೂರ್ತಿ ಎಂ. ಶಿಬಿರದ ನಿರ್ದೇಶಕರಾಗಿದ್ದು, ಅವರ ನೇತೃತ್ವದಲ್ಲಿ 8 ಮಂದಿ ಕಲಾವಿದರು ಕಾಷ್ಠ ಶಿಲ್ಪವನ್ನು ರಚಿಸುತ್ತಿದ್ದಾರೆ. ಶಿಬಿರದ ಶಿಲ್ಪ ಕಲಾವಿದರಾದ ಶಿವಕುಮಾರ್ ಜಿ.ವಿ(ಬೆಂಗಳೂರು), ಮಂಜುನಾಥ ಆಚಾರ್ಯ(ಚಿತ್ರದುರ್ಗ), ಸಿದ್ದರೂಡ(ಬಳ್ಳಾರಿ), ಶಿಲ್ಪಿ ಚಿದಾನಂದ(ವಿಟ್ಲ, ದ.ಕ), ಶಶಿಕುಮಾರ್ ಉಜಿರೆ(ದ.ಕ), ಕೃಷ್ಣ ಗುಡಿಗಾರ್(ಕುಂದಾಪುರ), ಕುಮಾರ್(ಕುಂದಾಪುರ), ಯತೀಶ್(ಕುಂದಾಪುರ) ಗಣೇಶ, ಶಿಲಾ ಬಾಲಿಕೆ, ದರ್ಪಣ ಸುಂದರಿ ಹೀಗೆ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.
ಉತ್ತರ-ದಕ್ಷಿಣ ಹೊಸ ನಂಟು: ಉತ್ತರ ಭಾರತದ ಕಲಾವಿದರು ತಮ್ಮದೇ ಶೈಲಿಯಲ್ಲಿ ದಕ್ಷಿಣ ಕನ್ನಡದ ಸಂಪ್ರದಾಯವನ್ನು ಕಲಾಕೃತಿಗಿಳಿಸುತ್ತಿರುವುದು ಈ ಶಿಬಿರದ ವಿಶೇಷ. ಛತೀಸ್ಗಡ ಕಲಾವಿದರಾದ ಬಂಶಿಲಾಲ್ ಬೈದ್, ರವಿಂದ್ ನಾಗ್, ಅಮೀರ್ ನಾಗ್, ಆಕಾಶ್ ನಾಗ್ ಲೋಹದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಅತೀ ತೆಳುವಾಗಿ ಲೋಹವನ್ನು ಬಳಸಿ, ನಾಜೂಕಾಗಿ ತುಳುನಾಡಿನ ಭೂತರಾಧನೆಯ ಮುಖವರ್ಣಿಕೆಗಳು ರಚಿಸುತ್ತಿದ್ದಾರೆ. ಅಪರೂಪದ ಕಲಾಕೃತಿ ಶೈಲಿಗೆ ತುಳುನಾಡಿನ ಸಂಪ್ರಾದಾಯಿಕ ರೂಪು ನೀಡಿದ್ದು ಶಿಲ್ಪಕಲೆಯಲ್ಲಿ ಹೊಸ ಸಾಧ್ಯತೆಯಂತಿದೆ.
ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿರುವ ಆಳ್ವಾಸ್ ಶಿಲ್ಪ ವಿರಾಸತ್ ನಲ್ಲಿ ಕಲಾಕೃತಿಯ ರಚನೆ ಮಾತ್ರವಲ್ಲ. ಕಲಾ ಮಾಧ್ಯಮದಲ್ಲಿರುವ ವಿಶೇಷತೆಗಳನ್ನು ವಿಚಾರ ವಿನಿಮಯಗಳು ನಡೆಯುತ್ತಿದೆ. ಮರ ಹಾಗೂ ಲೋಹಕ್ಕೆ ರೂಪು ನೀಡುವ ಕೆಲಸ ಕಲಾವಿದರಿಂದಾಗುತ್ತಿದೆ.