ಕಾಸರಗೋಡು: ಸಹಕಾರಿ ವಲಯವನ್ನು ಸಂರಕ್ಷಿಸಬೇಕು, ಪಡಿತರ ವಿತರಣಾ ವ್ಯವಸ್ಥೆಯನ್ನು ಖಾತರಿಪಡಿಸಬೇಕು, ಹಿಂಸಾಚಾರ ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕೇರಳ ಘಟಕ ಆಯೋಜಿಸಿದ ಉತ್ತರ ವಲಯ ಜಾಥಾ ಉಪ್ಪಳದಲ್ಲಿ ಗುರುವಾರ ರಾತ್ರಿ ಕೊನೆಗೊಂಡಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್ ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆದ ಈ ಯಾತ್ರೆ ಜಿಲ್ಲೆಯ ಪ್ರಮುಖ ಕೇಂದ್ರಗಳ ಮೂಲಕ ಹಾದು ಬಂದು ಉಪ್ಪಳದಲ್ಲಿ ಸಮಾಪನಗೊಂಡಿದ್ದು, ಸಮಾರೋಪ ಸಮಾರಂಭವನ್ನು ಬಿಜೆಪಿ ಶಾಸಕ ಒ.ರಾಜಗೋಪಾಲ್ ಉದ್ಘಾಟಿಸಿದರು.
ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ನೇತೃತ್ವದ ಸರಕಾರ ಹಿಂಸೆಗೆ ಪ್ರೋತ್ಸಾಹ ನೀಡುತ್ತಿದೆ. ಜನಸಾಮಾನ್ಯರ ಸಮಸ್ಯೆಗೆಳಿಗೆ ಸ್ಪಂದಿಸುತ್ತಿಲ್ಲ. ಪಡಿತರ ಸಾಮಾಗ್ರಿ ವಿತರಣೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಯ್ಕ್, ಮುಖಂಡರಾದ ಮುರಳೀಧರ ಯಾದವ್, ಪ್ರಕಾಶ್ ಬಾಬು, ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.