ಬಂಟ್ವಾಳ: ಎದುರಿನಿಂದ ಬರುತ್ತಿದ್ದ ವಾಹನವೊಂದು ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ತಿಂಗಳ ಹುಸುಳೆ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಾಯಗೊಂಡ ದಾರುಣ ಘಟನೆ ವಿಟ್ಲ ಸಮೀಪದ ಉಕ್ಕುಡದ ಫಾರೆಸ್ಟ್ ಗೇಟ್ ಬಳಿ ಸೋಮವಾರ ಸಂಭವಿಸಿದೆ.
ಕಡಂಬು ಸಮೀಪದ ಬದಿಯಾರು ನಿವಾಸಿ ಸುಲೈಮಾನ್ ಹಾಜಿ(60) ಮತ್ತು ಅವರ ಮೊಮ್ಮಗು ಸಝಾನ್(ನಾಲ್ಕು ತಿಂಗಳು) ಅಪಘಾತದಿಂದ ಮೃತಪಟ್ಟವರು. ಗಾಯಾಳುಗಳಾದ ಮೃತ ಸುಲೈಮಾನ್ ಹಾಜಿರವರ ಪತ್ನಿ ಸಲ್ಮ(50), ಮಗಳು ನಸೀರ(22), ಮೈದುನ ಮುಹಮ್ಮದ್(32), ಅವರ ಪತ್ನಿ ಝಹಾರ(28) ಪುತ್ರ ನಿಹಾ(6), ಪುತ್ರಿ ನೈಫಾ(ಮೂರು ತಿಂಗಳು)ರವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಣಚದ ಪರಿಯಲ್ತಡ್ಕದಲ್ಲಿರುವ ಸುಲೈಮಾನ್ ರವರ ಎರಡನೆ ಪುತ್ರಿಯ ಮಗುವಿನ ಹುಟ್ಟು ಹಬ್ಬದ ಪಾರ್ಟಿಗೆಂದು ಸುಲೈಮಾನ್ ಕುಟುಂಬ ಇಂದು ಮಧ್ಯಾಹ್ನ ಮಾರುತಿ ಆಲ್ಟೋ ಕಾರಿನಲ್ಲಿ ಕಡಂಬುವಿನಿಂದ ವಿಟ್ಲ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಉಕ್ಕುಡದ ಫಾರೆಸ್ಟ್ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ವಾಹನವೊಂದು ಸುಲೈಮಾನ್ ಹಾಜಿ ಕುಟುಂಬ ತೆರಳುತ್ತಿದ್ದ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳು ಮುಹಮ್ಮದ್ ಕಾರು ಚಲಾಯಿಸುತ್ತಿದ್ದರು. ಮೃತ ಹಸುಳೆ ಸಝಾನ್ ಗಾಯಾಳು ನಸೀರರ ಮಗುವಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸುಲೈಮಾನ್ ಹಾಜಿರವರು ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅಪಘಾತದಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜನರು ಜಮಾಯಿಸತೊಡಗಿದ್ದು ಕಾರಿನಲ್ಲಿದ್ದ ಹುಟ್ಟು ಹಬ್ಬಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಗಿಫ್ಟ್ ನೋಡಿ ಎಲ್ಲರು ದುಃಖ ವ್ಯಕ್ತಪಡಿಸುತ್ತಿದ್ದರು. ವಿಟ್ಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.