ಕಾರ್ಕಳ: ಕಳೆದ ಹಲವು ವರ್ಷಗಳಿಂದ ವಿವಿಧ ಜಾತಿಯ ವಿಷಪೂರಿತ ಹಾಗೂ ವಿಷ ರಹಿತ ಉರಗಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುತ್ತಿರುವಲ್ಲಿ ಜನಜನಿತರಾಗಿದ್ದ ನಗರದ ಪತ್ತೊಂಜಿಕಟ್ಟೆಯ ಆನಂದ ಅಂಚನ್(61) ಎಂಬವರು ಬೈಲೂರು ಕೌಡೂರು ಪರಿಸರದಲ್ಲಿ ಮನೆಯೊಂದರಲ್ಲಿ ನಾಗರಹಾವು ಹಿಡಿಯುತ್ತಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿ ದಾರುಣ ರೀತಿಯಲ್ಲಿ ಮೃತ ಪಟ್ಟ ಘಟನೆ ಸಂಭವಿಸಿದೆ.
ಮೊಬೈಲ್ ಕರೆಯ ಮೇರೆಗೆ ಸೋಮವಾರ ಸಂಜೆ ವೇಳೆಗೆ ಬೈಲೂರು ಕೌಡೂರು ಪರಿಸರಕ್ಕೆ ಮನೆಯಿಂದ ತೆರಳಿದ್ದರು. ಭಯಭೀತಗೊಂಡ ನಾಗರಹಾವು ದಾಳಿ ನಡೆಸಿ ಕಡಿದು ಗಾಯಗೊಳಿಸಿತು. ಹಾವು ಹಿಡಿಯುವ ಸಂದರ್ಭದಲ್ಲಿ ಉಂಟಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕೆಲವೊಂದು ನಾಟಿಮದ್ದುಗಳನ್ನು ಕೊಂಡು ಹೋಗುತ್ತಿದ್ದರಾದರೂ ನಿನ್ನೆ ಅದನ್ನೆಲ್ಲ ಮನೆಯಲ್ಲಿಯೇ ಬಿಟ್ಟು ಹೋಗಿರುವುದು ಘಟನೆಯಲ್ಲಿ ಪ್ರಾಣ ತೆರಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಹಾವು ಕಡಿತಕ್ಕೊಳಗಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸ್ಥಳೀಯರು ವಿನಂತಿಕೊಂಡಿದರಾದರೂ ಅದ್ಯಾವುದಕ್ಕೂ ಕ್ಯಾರೇ ಅನ್ನದೇ ನೇರವಾಗಿ ಕಾರ್ಕಳಕ್ಕೆ ಹಿಂತಿರುಗಿದ್ದಾರೆ. ಸುಮಾರು ಹೊತ್ತು ಕಳೆದುಹೋಗಿರುವುದರಿಂದ ದೈಹಿಕ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದು ಮನೆಗೆ ಹಿಂತಿರುಗಿದ್ದ ಅವರು ಕುಸಿದು ಬಿದ್ದು ಪ್ರಾಣ ತೆತ್ತಿದ್ದಾರೆ.
ಹಲವು ಭಾರೀ ಉರಗ ಕಡಿದಾಗ ನಾಟಿಮದ್ದಿನಲಿಯೇ ಗುಣಮುಖರಾಗಿದ್ದರು. ಹಲವು ವರ್ಷಗಳ ಹಿಂದೆ ಕಾರ್ಕಳ ನಗರದ ಪರಿಸರದಲ್ಲಿ ರಸ್ತೆಯ ಡಾಂಬರಿಗೆ ಸಿಲುಕಿ ವಿಲವಿಲನೆ ಒದಡ್ಡುತ್ತಿದ್ದ ನಾಗರ ಹಾವಿನ ರಕ್ಷಣೆಗೆ ಮುಂದಾಗಿದ್ದ ಸಂದರ್ಭದಲ್ಲಿ ಅದರ ರಕ್ಷಣೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಹಾವಿನ ಕಡಿತದಿಂದಾಗಿ ತನ್ನ ಬೆರಳನ್ನು ಕಳೆದುಕೊಂಡಿದ್ದರು. ಹಲವು ದಿನಗಳ ತನಕ ಚಿಕಿತ್ಸೆ ನೀಡಿ ಆ ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದರು. ಅವತ್ತಿನ ಘಟನೆಯು ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.
ಉರಗ ಹಿಡಿಯುವುದು ನಾಟಿ ಮದ್ದು ನೀಡುವುದು ವೃತ್ತಿಯನ್ನಾಗಿಸಿದ್ದರು. ಯಾವುದೇ ಪ್ರಭೇದಕ್ಕೆ ಸೇರಿದ ಉರಗಗಳು ಮನೆಯೋಳಗೆ ಪ್ರವೇಶ ಮಾಡಿದಾಗ ಕೂಡಲೇ ಆನಂದ ಅಂಚನ್ ಅವರಿಗೆ ಕರೆ ಬರುತ್ತಿರುವುದು ಸರ್ವೇ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ತೆರಳಿ ಉರಗ ಹಿಡಿಯುವ ಅವರು ನಿರ್ದಿಷ್ಟ ಮೊತ್ತವನ್ನು ನೀಡುವಂತೆ ಸತಾಯಿಸುತ್ತಿರಲಿಲ್ಲ. ವಿಷ ಪೂರಿತ ಹಾವು ಕಡಿತಕ್ಕೊಳಗಾದ ಹಲವರಿಗೆ ನಾಟಿಮದ್ದನ್ನು ನೀಡುತ್ತಿದ್ದರು. ಇದುವೇ ಅವರ ಬದುಕಿನ ವೃತ್ತಿಯಾಗಿತ್ತು ಎನ್ನುತ್ತಿದ್ದಾರೆ ಸ್ಥಳೀಯರು.