ಉಳ್ಳಾಲ: ಸುಡುಬಿಸಿಲ ತಾಪದ ನಡುವೆ ಯುವತಿಯೋರ್ವಳು ಬಿದ್ದು ರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದರೆ, ಕಾನೂನು ಅಡ್ಡಿಯಾಗುವುದೆಂಬ ಭಯದಿಂದ ವಾಹನ ಸವಾರರಾಗಲಿ, ಪಾದಚಾರಿಗಳಾಗಲಿ ಆಕೆಯನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಲಿಲ್ಲ. ಇನ್ನೊಂದೆಡೆ ಯುವತಿ ಸಮುದಾಯದವರು ಅಡ್ಡಿಯಾಗುವುದೆಂಬ ಭೀತಿಯಿಂದ ಹಲವರು ಒಂದು ಕ್ಷಣ ವಾಹನ ನಿಲ್ಲಿಸಿದರೂ ಮತ್ತೆ ಆಕೆಯನ್ನು ನೋಡಿ ಸ್ಥಳದಿಂದ ಕಾಲ್ಕಿತ್ತಿದ್ದರು. ಈ ನಡುವೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ತಮ್ಮ ಸರಕಾರಿ ವಾಹನದಲ್ಲಿ ಆಕೆಯನ್ನು ಮನೆ ಸೇರಿಸುವ ಮೂಲಕ ಮಾನವೀಯತೆ ಮೆರೆದ ಸನ್ನಿವೇಶ ಸೋಮವಾರ ನಡೆಯಿತು.
ಎದ್ದು ನಿಲ್ಲಲು ಹೋರಾಡುತ್ತಿದ್ದ ಯುವತಿಯ ದಯನೀಯ ಸ್ಥಿತಿಯನ್ನು ಕಂಡು ಮಂಗಳೂರು ಕಡೆಗೆ ಹೊರಟಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ವಾಹನವನ್ನು ನಿಲ್ಲಿಸಿದ್ದರು. ರಸ್ತೆ ಬದಿಯಲ್ಲಿ ಸುಡುಬಿಸಿಲಿನಲ್ಲಿ ನರಳಾಡುತ್ತಿದ್ದ ಯುವತಿಯ ಮಾಹಿತಿ ಕೇಳಿದರೂ ಆಕೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಬಿಸಿಲಿನಿಂದ ಸಮೀಪದ ಬಸ್ಸು ನಿಲ್ದಾಣಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷರು ಸಹಿತ ಇತರರು ಕರೆತಂದು ನೀರು ಕುಡಿಸಿದರು. ಬಳಿಕ ಕೊಣಾಜೆ ಪೊಲೀಸ್ ಠಾಣೆಗೂ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಸ್ಥಳಕ್ಕೆ ಓರ್ವ ಪೊಲೀಸ್ ಪೇದೆ ಆಗಮಿಸಿದ್ದರಿಂದಾಗಿ ಯುವತಿಯನ್ನು ಮನೆಗೆ ಸೇರಿಸಲು ಅಸಾಧ್ಯವಾಗಿತ್ತು. ಅದರಂತೆ ಪೊಲೀಸ್ ಪೇದೆಯನ್ನು ತಮ್ಮ ವಾಹನದ ಜತೆಗೆ ಬರುವಂತೆ ತಿಳಿಸಿ ಯುವತಿಯನ್ನು ಅಸೈಗೋಳಿ ಸಮೀಪದ ಮನೆಗೆ ತಲುಪಿಸಿ ಮಾನವೀಯತೆ ಮೆರೆದರು.