ಸುಳ್ಯ: ದೇಶದ ಕಾರ್ಪೋರೇಟ್ ಸಂಸ್ಥೆಗಳಿಗೆ ನೆರವು ನೀಡಲು ಮತ್ತು ಶ್ರೀಮಂತರಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ನೋಟ್ ನಿಷೇಧ ಎಂಬ ನಾಟಕ ಮಾಡಿದೆ ಎಂದು ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜ ಆಪಾದಿಸಿದ್ದಾರೆ.
ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿರುವುದರಿಂದ ಅಡಕೆಯ ಬೆಲೆ ಕುಸಿತ ಸೇರಿದಂತೆ ಕೃಷಿಕರಿಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನ ನೇತೃತ್ವದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಂಭಾಗದಲ್ಲಿ ನಡೆದ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆರ್ಥಿಕತೆ ಗೊತ್ತಿಲ್ಲದ ಅಸಮರ್ಥ ಪ್ರಧಾನಿಯು ನೋಟ್ ನಿಷೇಧದಂತಹಾ ತೀರ್ಮಾನ ಕೈಗೊಂಡು ದೇಶದ ಜನತೆಯನ್ನು ಮುರ್ಖರನ್ನಾಗಿ ಮಾಡಿದ್ದಾರೆ ಎಂದು ಹೇಳಿದ ಅವರು ದೇಶವು ಸೂಪರ್ ಪವರ್ ಆಗಲು ದೇಶದ ಆರ್ಥಿಕ ಸ್ಥಿತಿ ಗಟ್ಟಿಯಾಗಿರಬೇಕು. ಆದರೆ ಈ ರೀತಿಯ ನಿರ್ಧಾರದಿಂದ ದೇಶವು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಿದೆ. ದೇಶದ ಕೃಷಿಕರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಸಾಮಾನ್ಯ ಜನರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಯಾವುದೇ ಸಿದ್ಧತೆಯನ್ನೂ ಮಾಡದೆ ಶೇ.80 ರಷ್ಟು ಏಕಾ ಏಕಿ ನೋಟುಗಳನ್ನು ಹಿಂಪಡೆದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದರ ಜೊತೆಗೆ ಸ್ವಾಯತ್ತ ಸಂಸ್ಥೆಯಾದ ಆರ್ ಬಿಐಯ ಅಧಿಕಾರವನ್ನೂ ಕೇಂದ್ರ ಸರ್ಕಾರ ಕಿತ್ತು ಕೊಂಡಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿ ದೇಶದಲ್ಲಿ ನೋಟುಗಳನ್ನು ನಿಷೇಧ ಮಾಡುವ ಮೂಲಕ ಕೇಂದ್ರ ಸರ್ಕಾರ 125 ಕೋಟಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ನೋಟು ನಿಷೇಧ ಕೇಂದ್ರ ಸರ್ಕಾರದ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ಹೇಳಿದರು.
ನವೆಂಬರ್ ಎಂಟು ದೇಶದ ರೈತರ ಪಾಲಿಗೆ ಕರಾಳ ದಿನ ಎಂದು ಬಣ್ಣಿಸಿದ ಅವರು 73 ದಿವಸವಾದರೂ ದೇಶದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ. ದೇಶದಲ್ಲಿ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಏರಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ನರೇಂದ್ರ ಮೋದಿ ದೇಶದಲ್ಲಿ ತುಘಲಕ್ ಆಡಳಿತವನ್ನು ನಡೆಸುತ್ತಿದೆ ಎಂದು ಆಪಾದಿಸಿದರು. ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಕರ್ನಾಟಕ ಸೇರಿದಂತೆ ದೇಶದಲ್ಲಿ ಎಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಆಡಳಿತದಿಂದ ದೇಶ ಬಿಜೆಪಿ ಮುಕ್ತ ಆಗಲಿದೆ ಎಂದರು.
ಸುಳ್ಯ ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ಹಿರಿಯ ವಕೀಲ ಸೋರ್ಯನಾರಾಯಣ ಭಟ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ, ಡಾ.ಬಿ.ರಘು, ಪಿ.ಎಸ್.ಗಂಗಾಧರ, ನಂದರಾಜ ಸಂಕೇಶ್, ಸುಜಯಾಕೃಷ್ಣ, ಚಂದ್ರಶೇಖರ ಕಾಮತ್, ಕಿರಣ್ ಬುಡ್ಲೆಗುತ್ತು, ಬೀರಾಮೊಯ್ದೀನ್, ವೇಣುಗೋಪಾಲಕೃಷ್ಣ ಮತ್ತಿತರರು ಮಾತನಾಡಿದರು. ಎಸ್.ಸಂಶುದ್ದೀನ್, ಟಿ.ಎಂ.ಶಹೀದ್, ಕೆ.ಗೋಕುಲ್ದಾಸ್, ಕೆ.ಎಂ.ಮುಸ್ತಫಾ, ತೀರ್ಥರಾಮ ಜಾಲ್ಸೂರು, ಅಬ್ದುಲ್ ಗಫೂರ್, ಅನುಸೂಯ, ಜಿ.ಕೆ.ಹಮೀದ್, ದಿನೇಶ್ ಅಂಬೆಕಲ್ಲು, ಕೇಶವಪ್ರಸಾದ್, ಮೂಸಾ ಪೈಂಬೆಚ್ಚಾಲ್, ಮಹಮ್ಮದ್ ಪವಾಜ್, ಧೀರ ಕ್ರಾಸ್ತಾ, ರಾಧಾಕೃಷ್ಣ ಪರಿವಾರಕಾನ, ಪಿ.ಎ.ಮಹಮ್ಮದ್, ಅನಿಲ್ ರೈ, ಮಹಮ್ಮದ್ ಕುಞಿ ಗೂನಡ್ಕ, ಅಚ್ಚುತ ಮಲ್ಕಜೆ, ಅಶೋಕ್ ಚೂಂತಾರು, ಲಕ್ಷ್ಮಣ ಶೆಣೈ, ಚಂದ್ರಲಿಂಗಂ, ಲಕ್ಷ್ಮಿ ಸುಬ್ರಹ್ಮಣ್ಯ, ತಿರುಮಲೇಶ್ವರಿ, ಶ್ರೀಲತಾ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.