ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಮಾರ್ಚ್ ಮೊದಲ ವಾರದಲ್ಲಿ ವೈದ್ಯಕೀಯ ಶಿಬಿರ ನಡೆಸಲು ತೀರ್ಮಾನಿಸಿದೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆದ ನೂತನ ಎಂಡೋಸಲ್ಫಾನ್ ಸೆಲ್ ಪ್ರಥಮ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಂತ್ರಸ್ಥ ಪಟ್ಟಿಗೆ ಅನರ್ಹರು ಸೇರ್ಪಡೆಗೊಳ್ಳದಂತೆ ಎಲ್ಲಾ ಸಂತ್ರಸ್ತರನ್ನು ಸಂತ್ರಸ್ಥ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಶಿಬಿರ ನಡೆಸಲಾಗುವುದು. ಈ ಹಿಂದೆ ಅರ್ಜಿ ಸಲ್ಲಿಸಿದವರಿಗೂ ಅವಕಾಶ ಲಭಿಸಲಿದೆ. 2013ರ ವೈದ್ಯಕೀಯ ಶಿಬಿರದ ಮಾನದಂಡದಂತೆ ರೋಗಿಗಳ ತಪಾಸಣೆ ನಡೆಸಿ ರೋಗಿಗಳನ್ನು ಸಂತ್ರಸ್ತ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಈ ಹಿಂದೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ನಷ್ಟ ಪರಿಹಾರದ ಮೂರನೇ ಹಂತದ ನೆರವನ್ನು ನೀಡಲು ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಇ. ಚಂದ್ರಶೇಖರನ್ ಹೇಳಿದರು.
ಗೋದಾಮುಗಳಲ್ಲಿ ದಾಸ್ತಾನಿರುವ ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸಲು ಎರ್ನಾಕುಲಂ ನ ಎಚ್.ಎ.ಎಲ್ ಜೊತೆ ಮಾತುಕತೆ ನಡೆಸಲು ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರವರಿಗೆ ಉಸ್ತುವಾರಿ ನೀಡಲಾಯಿತು.
ಎಂಡೋ ಸಂತ್ರಸ್ಥ ಪಟ್ಟಿಯಲ್ಲಿನ ಎಲ್ಲಾ ಕುಟುಂಬಗಳನ್ನು ಬಿಪಿಎಲ್ ಪಟ್ಟಿಗೆ ಸೇರ್ಪಡೆಗೊಳಿಸಿ ಪಡಿತರ ಸಾಮಾಗ್ರಿ ವಿತರಣೆಗೆ ವಿಶೇಷ ಆದೇಶ ಹೊರಡಿಸಲು ಸಭೆ ಒತ್ತಾಯಿಸಿತು. ಮುಳಿಯಾರ್ ನಲ್ಲಿ ನಿರ್ಮಿಸುವ ಪುನರ್ವಸತಿ ಗ್ರಾಮಕ್ಕೆ ಮೊದಲ ಗಡುವಾಗಿ ಐದು ಕೋಟಿ ರೂ.ವೆಚ್ಚ ಮಾಡಲು ಆಡಾಳಿತನುಮತಿ ನೀಡಲಾಯಿತು.
ಸಂತ್ರಸ್ಥರ ಮೂರು ಲಕ್ಷ ರೂ.ತನಕದ ಸಾಲ ಮನ್ನಾ ಮಾಡುವ ಕುರಿತು ಅನುಮತಿ ಪಡೆಯಲು ತೀರ್ಮಾನಿಸಲಾಯಿತು. ಎಂಡೋ ಪುನರ್ವಸತಿ ಸೆಲ್ ನಲ್ಲಿ ಜಿಲ್ಲೆಯ ಎಲ್ಲಾ ಮಾಜಿ ಶಾಸಕನ್ನು ಸೇರ್ಪಡೆಗೊಳಿಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ಥ ರ ಕಲ್ಯಾಣಕ್ಕಾಗಿ ಕಾರ್ಯಾಚರಿಸುತ್ತಿರುವ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರ ಪಟ್ಟಿಯನ್ನು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ. ನಬಾರ್ಡ್ ಆರ್ ಐ ಡಿ ಎಫ್ ಯೋಜನೆಗಳನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಹಲವು ಕಾರಣಗಳಿಂದ ಮೊಟಕುಗೊಂಡ ಯೋಜನೆಗಳಿಗೆ ಸಭೆ ಅನುಮತಿ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ಸಂಸದ ಪಿ. ಕರುಣಾಕರನ್ ಶಾಸಕರಾದ ಎನ್.ಎ ನೆಲ್ಲಿಕುನ್ನು, ಪಿ .ಬಿ ಅಬ್ದುಲ್ ರಜಾಕ್, ಎಂ. ರಾಜಗೋಪಾಲ್, ಕೆ. ಕುಞರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಷೀರ್, ಮಾಜಿ ಸಚಿವರಾದ ಚೆರ್ಕಳ೦ ಅಬ್ದುಲ್ಲ, ಸಿ.ಟಿ ಆಹಮ್ಮದಾಲಿ, ಬ್ಲಾಕ್ ಪಂಚಾಯತ್ ಅಧ್ಯಕ್ಷರು, ಎಂಡೋ ಸಂತ್ರಸ್ತ ವಲಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಇತರ ಜನಪ್ರಧಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.