ಬಂಟ್ವಾಳ: ಪುರಸಭೆಯ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದು, ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಅಪರಾಹ್ನ ಪುರಸಭಾ ಕಛೇರಿಗೆ ದಿಡೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಕಳೆದ ತಿಂಗಳು ನಡೆದಿದ್ದ ಪಂಚತೀರ್ಥ-ಸಪ್ತಕ್ಷೇತ್ರ ಯಾತ್ರೆಯ ಸಂದರ್ಭ ಪುರಸಭಾ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಬ್ಯಾನರ್ ಅನ್ನು ಪುರಸಭಾ ಆಡಳಿತ ಕಾನೂನಿನ ಕಾರಣವನ್ನೊಡ್ಡಿ ತೆರವುಗೊಳಿಸಿತ್ತು. ಆದರೆ ಮಂಗಳವಾರ ನಡೆದ ಸಚಿವರ ಕಾರ್ಯಕ್ರಮದ ಪ್ರಚಾರಕ್ಕೆ ಫ್ಲೆಕ್ಸ್ ಬ್ಯಾನರ್ ಹಾಕಿದ್ದು, ಯಾಕೆ? ಪ್ಲಾಸ್ಟಿಕ್ ನಿಷೇಧ ಕುರಿತು ಜಿಲ್ಲಾಧಿಕಾರಿಗಳ ಆದೇಶ, ಪುರಸಭೆಯ ನಿರ್ಣಯವಿದ್ದರೂ ಅನುಮತಿ ನೀಡಿದ್ದು ಯಾಕೆ? ಮೊದಲಾದ ಪ್ರಶ್ನೆಗಳೊಂದಿಗೆ ಮುಖ್ಯಾಧಿಕಾರಿ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅನಧಿಕೃತ ಬ್ಯಾನರ್ ತೆರವುಗೊಳಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರಾದರೂ, ಬ್ಯಾನರ್ ತೆರವಿನ ಕ್ರಮಕ್ಕೆ ಆಗ್ರಹಿಸಿದರು. ಕೊನೆಗೂ ಒತ್ತಡಕ್ಕೆ ಮಣಿದ ಮುಖ್ಯಾಧಿಕಾರಿಯವರು ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸಿದರು. ಅದರೊಂದಿಗೆ ಪ್ರತಿಭಟನೆಗೆ ತೆರಬಿತ್ತು, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ, ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.