ಕಾಸರಗೋಡು: ಕಣ್ಣೂರು ಧರ್ಮಡ೦ನಲ್ಲಿ ಬಿಜೆಪಿ ಕಾರ್ಯಕರ್ತನನ್ನು ಮನೆಗೆ ನುಗ್ಗಿದ ತಂಡವೊಂದು ಕೊಚ್ಚಿ ಕೊಲೆಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಧರ್ಮಡ೦ ಅಂಡಲ್ಲೂರಿನ ಸಂತೋಷ್ (52) ಕೊಲೆಗೀಡಾದವರು. ರಾತ್ರಿ 11.30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಮಾರಕಾಯುಧ ಸಹಿತ ಮನೆಯ ಬಾಗಿಲು ಮುರಿದು ಒಳನುಗ್ಗಿದ ತಂಡವು ಈ ಕೃತ್ಯ ನಡೆಸಿದೆ.
ಗಂಭೀರ ಗಾಯಗೊಂಡಿದ್ದ ಸಂತೋಷ್ ರನ್ನು ಸುದ್ದಿ ತಿಳಿದು ಸ್ಥಳಕ್ಕೆ ತಲಪಿದ ಪೊಲೀಸರು ಮತ್ತು ಸ್ಥಳೀಯರು ತಲಶ್ಯೇರಿಯಲ್ಲಿರುವ ಸಹಕಾರಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಕೃತ್ಯ ನಡೆಯುವ ಸಂದರ್ಭದಲ್ಲಿ ಸಂತೋಷ್ ಮಾತ್ರ ಮನೆಯಲ್ಲಿದ್ದರು.
ಕೃತ್ಯವನ್ನು ಖಂಡಿಸಿ ಬಿಜೆಪಿ ಇಂದು ಕಣ್ಣೂರು ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿದೆ. ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ವಿನಾಯಿತಿ ನೀಡಲಾಗಿದೆ. ಕೊಲೆ ಹಾಗೂ ಬಂದ್ ಹಿನ್ನಲೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಬಸ್ಸು ಸೇರಿದಂತೆ ವಾಹನ ಸಂಚಾರ ಸ್ಥಗಿತ ಗೊಂಡಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಈ ನಡುವೆ ತಳಿಪರಂಬದಲ್ಲಿ ಆರ್ ಎಸ್ ಎಸ್ ಕಾರ್ಯಾಲಯದ ಮೇಲೆ ಇಂದು ಮುಂಜಾನೆ ನಾಡ ಬಾಂಬೆಸೆಯಲಾಗಿದ್ದು, ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳಿಗೆ ಹಾನಿ ಉಂಟಾಗಿದೆ. ಘಟನೆ ಹಿನ್ನಲೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.