ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಬೈಲು ಎಂಬಲ್ಲಿ ಸುರೇಶ್ ಆಚಾರ್ಯ ಅವರ ಮನೆಯಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಎರಡು ಲಕ್ಷ ರೂ ಹಾನಿಯಾಗಿದೆ. ಮನೆಯ ಛಾವಣಿಗೆ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಸುರೇಶ್ ಆಚಾರ್ಯ ಅದಾಗಲೇ ಕೆಲಸಕ್ಕೆ ತೆರಳಿದ್ದರು. ಮನೆ ಮಂದಿ ಹೊರಗಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಬೆಂಕಿಯ ತೀವ್ರತೆಗೆ ಛಾವಣಿ, ಮನೆಯೊಳಗಿನ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮತ್ತು ವಿದ್ಯುತ್ ವಯರಿಂಗ್ ಗೆ ಹಾನಿಯಾಗಿದ್ದು ಶಾರ್ಟ್ ಸರ್ಕ್ಯೂಟ್ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸ್ಥಳೀಯ ಮುಖಂಡ ಮಿತ್ತಬೈಲು ವಾಸುದೇವ ನಾಯಕ್ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಿಕೊಂಡು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಶಾಸಕ ಅಭಯಚಂದ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪಂಚಾಯತ್ ಸದಸ್ಯ ಶಶಿಧರ ನಾಯಕ್, ತಹಸೀಲ್ದಾರ್ ಮಹಮ್ಮದ್ ಇಸಾಕ್, ಗ್ರಾಮ ಲೆಕ್ಕಿಗ ಗೋಪಾಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.