ಸುಳ್ಯ: ಕಾರನ್ನು ಅಡ್ಡಗಟ್ಟಿ ಪಿಸ್ತೂಲು, ತಲವಾರು ತೋರಿಸಿ ಬೆದರಿಸಿ ಐದು ಲಕ್ಷ ರೂ ಹಾಡ ಹಗಲೇ ದರೋಡೆ ಮಾಡಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಘಟನೆ ನಡೆದಿದೆ. ಗುತ್ತಿಗಾರಿನಲ್ಲಿ ಅಡಕೆ ವ್ಯಾಪಾರ ನಡೆಸುತ್ತಿರುವ ಬೆಳ್ಳಾರೆ ಉಮಿಕ್ಕಳದ ಅಬ್ದುಲ್ ಖಾದರ್ ಅವರ ಕಾರನ್ನು ತಡೆದು ಅಪರಿಚಿತರ ತಂಡ ದರೋಡೆ ಮಾಡಿದೆ. ಗುತ್ತಿಗಾರಿನಲ್ಲಿ ಪ್ರಗತಿ ಎಂಟರ್ ಪ್ರೈಸಸ್ ಎಂಬ ಅಡಕೆ ವ್ಯಾಪಾರದ ಅಂಗಡಿಯನ್ನು ನಡೆಸುತ್ತಿರುವ ಅಬ್ದುಲ್ ಖಾದರ್ ಅವರು ತಮ್ಮ ಕೆಲಸದವರಾದ ಶಫೀಕ್, ಯಾಸಿರ್ ಮತ್ತು ಬಸವರಾಜ್ ಅವರನ್ನು ಕರೆದುಕೊಂಡು ತಮ್ಮ ಕಾರಿನಲ್ಲಿ ಬೆಳಿಗ್ಗೆ 7.45ರ ವೇಳೆಗೆ ಬೆಳ್ಳಾರೆಯಿಂದ ಹೊರಟು ಐವರ್ನಾಡು ಕೆಳಗಿನ ಪೇಟೆಯ ಬಳಿ ತಲುಪಿದಾಗ ಇವರ ಕಾರಿನ ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರು ಇವರ ಕಾರನ್ನು ಓವರ್ಟೇಕ್ ಮಾಡಿ ಅಡ್ಡಲಾಗಿ ನಿಲ್ಲಿಸಿ ಕಾರಿನಿಂದ ನಾಲ್ಕು ಮಂದಿ ಇಳಿದು ಇವರ ಕಾರನ್ನು ಸುತ್ತುವರಿದು ಮೂರು ಮಂದಿ ಪಿಸ್ತೂಲ್ ಮತ್ತು ಓರ್ವ ಚೂರಿಯನ್ನು ಹಿಡಿದು ಬೆದರಿಸಿ ಓರ್ವ ಬಲಾತ್ಕಾರದಿಂದ ಕಾರಿನ ಕೀಯನ್ನು ಕಿತ್ತುಕೊಂಡು ಕಾರನ್ನು ಲಾಕ್ ಮಾಡಿದ್ದಾನೆ. ಮತ್ತೋರ್ವ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶಫೀಕ್ನ ಕೈಯಿಂದ ಹಣವಿದ್ದ ಬ್ಯಾಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಶಫೀಕ್ ಪ್ರತಿಭಟಿಸಿದಾದ ಶಫೀಕ್ ನ ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿ ಬಲಾತ್ಕಾರವಾಗಿ ಬ್ಯಾಗನ್ನು ಕಸಿದುಕೊಂಡಿದ್ದಾನೆ. ಬ್ಯಾಗ್ ನಲ್ಲಿದ್ದ ಸುಮಾರು ಐದು ಲಕ್ಷ ರೂ ನಗದು, ಬ್ಯಾಂಕ್ ಚೆಕ್ ಪುಸ್ತಕಗಳು, ಅಂಗಡಿಯ ಕೀ, ಸೇಲ್ ಪುಸ್ತಕ, ಸ್ಟಾಕ್ ಪುಸ್ತಕ ಹಾಗು ಇತರ ದಾಖಲಾತಿಗಳು ಹಾಗು ಇವರ ಬಳಿಯಲ್ಲಿದ್ದ ಮೂರು ಮೊಬೈಲ್ ಪೋನ್ ಗಳನ್ನು ಕಸಿದುಕೊಳ್ಳಲಾಗಿದೆ ಎಂದು ಅಬ್ದುಲ್ ಖಾದರ್ ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇವರನ್ನು ದರೋಡೆಗೈದ ತಂಡ ಬಳಿಕ ಅವರು ಬಂದ ಕಾರು ಹತ್ತಿ ಪರಾರಿಯಾಗಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೊರಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಸುಳ್ಯ ಎಸ್ಐ ಹೆಚ್.ವಿ.ಚಂದ್ರಶೇಖರ್ ಮತ್ತು ಬೆಳ್ಳಾರೆ ಎಸ್ಐ ಚೆಲುವಯ್ಯ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಐದು ಮಂದಿಯ ಕೃತ್ಯ:
ದರೋಡೆಕೋರರ ತಂಡದಲ್ಲಿ ಕಾರಿನ ಚಾಲಕ ಸಹೀತ ಐದು ಮಂದಿ ಇದ್ದರು. ಇವರಲ್ಲಿ ನಾಲ್ಕು ಮಂದಿ ಮಾತ್ರ ಕಾರಿನಿಂದ ಇಳಿದಿದ್ದರು. ಮೂವರು ಪಿಸ್ತೂಲ್ ಮತ್ತು ಓರ್ವ ಚೂರಿ ಹಿಡಿದು ಕಾರಿನ ನಾಲ್ಕು ಬಾಗಿಲನ್ನು ಸುತ್ತುವರಿದು ಬೆದರಿಸಿ ದರೋಡೆ ಮಾಡಿದ್ದಾರೆ. ಎಲ್ಲರೂ ಮೂವತ್ತರ ಕೆಳಗಿನ ಪ್ರಾಯದವರಾಗಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಟೀ ಶರ್ಟ್ ಧರಿಸಿದ್ದರು ಎಂದು ಅಬ್ದುಲ್ ಖಾದರ್ ವಿವರಿಸಿದ್ದಾರೆ. ಇವರು ಕಾರನ್ನು ಹಿಂಬಾಲಿಸಿ ಕೊಂಡು ಬಂದಿರುವ ಯಾವುದೇ ಸೂಚನೆಯೂ ಅಬ್ದುಲ್ ಖಾದರ್ರಿಗೆ ಸಿಕ್ಕಿರಲಿಲ್ಲ. ವೇಗವಾಗಿ ಬಂದು ಓವರ್ಟೇಕ್ ಮಾಡಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ದರೋಡೆ ನಡೆಸಿ ಪರಾರಿಯಾದರು.
ಪರಿಚಿತರ ಕೈವಾಡ ಶಂಕೆ:
ಬೆಳ್ಳಾರೆ-ಐವರ್ನಾಡು ರಸ್ತೆಯಲ್ಲಿ ಈ ರೀತಿಯ ದರೋಡೆ ಕೃತ್ಯ ನಡೆಸಿರುವುದು ಪೂರ್ವ ಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಅಬ್ದುಲ್ ಖಾದರ್ ಅವರು ಬೆಳ್ಳಾರೆಯಿಂದ ಪ್ರತಿ ದಿನ ಗುತ್ತಿಗಾರಿನ ತನ್ನ ಅಡಕೆ ಅಂಗಡಿಗೆ ಹೋಗಿ ಬರುತ್ತಿದ್ದರು. ಈ ವಿಷಯಗಳನ್ನು ತಿಳಿದವರೇ ಆದ ಪರಿಚಿತರು ಅಥವಾ ಸ್ಥಳೀಯರು ಇದರಲ್ಲಿ ಶಾಮೀಲಾಗಿರುವ ಶಂಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ದೃಶ್ಯಗಳ ಪರಿಶೀಲನೆ ಸೇರಿದಂತೆ ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದಾರೆ.
ಎರಡು ವಿಶೇಷ ತಂಡ:ಎಸ್ಪಿ
ಐವರ್ನಾಡಿನಲ್ಲಿ ಹಾಡಹಗಲೇ ನಡೆದ ದರೋಡೆ ಪ್ರಕರಣವನ್ನು ಭೇದಿಸಲು ಸುಳ್ಯ ಮತ್ತು ಬೆಳ್ಳಾರೆ ಎಸ್ಐ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿದೆ. ಜಿಲ್ಲಾ ಅಪರಾಧ ಪತ್ತೆ ದಳವೂ ತನಿಖೆ ನಡೆಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೊರಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಡಹಗಲೇ ನಡೆದ ಈ ಕೃತ್ಯವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು ಸ್ಥಳೀಯರ ಅಥವಾ ಪರಿಚಿತರ ಕೈವಾಡ ಇರುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುವುದು. ಕೆಲವೊಂದು ಸೂಚನೆಗಳು ದೊರೆತಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಅವರು ಹೇಳಿದರು.