ಸುಳ್ಯ: ನದಿಗಳ ಮೇಲೆ ತೂಗು ಸೇತುವೆಗಳನ್ನು ನಿಸುವ ಮೂಲಕ ಗ್ರಾಮೀಣ ಪ್ರದೇಶದ ಬಾಳಿಗೆ ಬೆಳಕಾದ ತೂಗು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್ ರಿಗೆ ಪದ್ಮಶ್ರೀ ಪ್ರಶಸ್ತಿಯ ಗರಿ. ಕಳೆದ ಮೂರು ದಶಕಗಳಿಂದ ದೇಶದ ವಿವಿಧ ಕಡೆಗಳಲ್ಲಿ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ವಿಶ್ವವಿಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ಅವರ ಮೂಲಕ ಸುಳ್ಯಕ್ಕೆ ಪ್ರಥಮ ಪದ್ಮ ಪ್ರಶಸ್ತಿ ಹರಿದು ಬಂದಿದೆ.
ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಗಿರೀಶ್ ಭಾರದ್ವಾಜರು ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಪ್ರಥಮವಾಗಿ 55 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸುವ ಮೂಲಕ ವಿನೂತನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ತನ್ನ ಊರಾದ ಸುಳ್ಯ ಅರಂಬೂರಿನಲ್ಲಿ ಜನರ ಒತ್ತಾಯಕ್ಕೆ ಮಣಿದು ಪಯಸ್ವಿನಿ ನದಿಗೆ ಅಡ್ಡಲಾಗಿ 87 ಮೀಟರ್ ನ ತೂಗು ಸೇತುವೆಯನ್ನು ನಿರ್ಮಿಸಿದರು. ಬಳಿಕ ಹಿಂತಿರುಗಿ ನೋಡಿಲ್ಲ. ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡ ಭಾರದ್ವಾಜರ 28 ವರ್ಷಗಳ ಜೈತ್ರ ಯಾತ್ರೆಯಲ್ಲಿ 127 ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ. ಎರಡು ನಿರ್ಮಾಣ ಹಂತದಲ್ಲಿದೆ. ಕರ್ನಾಟಕದಲ್ಲಿ 91, ಕೇರಳದಲ್ಲಿ 30, ಆಂಧ್ರಪ್ರದೇಶದಲ್ಲಿ ಮೂರು ಹಾಗು ಒಡಿಶಾದಲ್ಲಿ ಮೂರು ಸೇತುವೆಗಳನ್ನು ನಿರ್ಮಿಸಿದ್ದಾರೆ. ಬೆಳಗಾಂ ಜಿಲ್ಲೆಯ ಹುಕ್ಕೇರಿಯಲ್ಲಿ 1999ರಲ್ಲಿ ನಿರ್ಮಿಸಿದ 290 ಮೀಟರ್ ಉದ್ದದ ಸೇತುವೆ ಈ ವರೆಗಿನ ನಿರ್ಮಾಣವಾದವುಗಳಲ್ಲಿ ಅತೀ ಉದ್ದವಾದುದು.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನವರಾದ ಗಿರೀಶ್ ಭಾರದ್ವಾಜ್ ಬಿ.ಕೃಷ್ಣಭಟ್-ಲಕ್ಷ್ಮಿಅಮ್ಮ ದಂಪತಿಗಳ ಪುತ್ರನಾಗಿ 12-05-1950 ರಲ್ಲಿ ಜನಿಸಿದರು. ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಗ್ರಾಮೀಣ ಬದುಕಿಗೆ ಸಹಾಯವಾಗುವ ಮಾಡಿ ಕೃಷಿ ಯಂತ್ರೋಪಕರಣಗಳ ದುರಸ್ತಿ, ಗೋಬರ್ ಅನಿಲ ಸ್ಥಾವರ ನಿರ್ಮಾಣದ ಕಿರು ಉದ್ದಿಮೆ ಸ್ಥಾಪನೆ ಮಾಡಿದರು. ಬಳಿಕ ತೂಗು ಸೇತುವೆಗಳ ನಿರ್ಮಾಣದ ಕೈಂಕರ್ಯ ಮಾಡುವ ಮೂಲಕ ಮನೆ ಮಾತಾದ ಭಾರದ್ವಾಜರು ಮಳೆಗಾಲದಲ್ಲಿ ದ್ವೀಪಾಗುವ ಸಾವಿರಾರು ಹಳ್ಳಿಗಳ ಜನರಿಗೆ ತಮ್ಮ ತೂಗು ಸೇತುವೆಗಳ ಮೂಲಕ ಹೊರ ಜಗತ್ತಿಗೆ ಸಂಪರ್ಕವನ್ನು ಕಲ್ಪಿಸಿದರು. ಆ ಮೂಲಕ ಲಕ್ಷಾಂತರ ಮಂದಿಯ ಬಾಳಿಗೆ ಬೆಳಕಾದರು. ವಿಶೇಷ ಪ್ರಯತ್ನದ ಮೂಲಕ ಜನರ ಬದುಕನ್ನು ಕಟ್ಟಿದ ಭಾರದ್ವಾಜರು ತಮ್ಮ ಸ್ನೇಹಮಹಿ ಒಡನಾಟದ ಮೂಲಕ ಜನರ ಹೃದಯವನ್ನೂ ಗೆದ್ದರು.
ಸ್ನೇಹದಿಂದ ಗೆಲ್ಲಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ’ ಅನ್ನುವುದನ್ನು ದೃಢವಾಗಿ ನಂಬಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಅವರು. 2007ರಲ್ಲಿ ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿರುವ ಲಕ್ನಾವರಂ ಸರೋವರದ ಮೇಲೆ ತೂಗುಸೇತುವೆ ನಿರ್ಮಿಸಲು ಮುಂದಾದಾಗ ಅಲ್ಲಿನ ನಕ್ಸಲ್ ಅನುಯಾಯಿಗಳು ಅಡ್ಡಿಪಡಿಸಿ ಬೆದರಿಕೆ ಒಡ್ಡಿದರು. ಅವರ ಮನವೊಲಿಸಿ ದೃಢ ಸಂಕಲ್ಪದಿಂದ ಕಾರ್ಯ ಕೈಗೆತ್ತಿಕೊಂಡು ನಾಲ್ಕು ತಿಂಗಳುಗಳಲ್ಲಿ ಸೇತುವೆಯನ್ನು ಪೂರ್ಣಗೊಳಿಸಿ ಜನೋಪಯೋಗಕ್ಕೆ ಒದಗಿಸಿಕೊಟ್ಟಾಗ ಅದೇ ವ್ಯಕ್ತಿಗಳು ಕಂಬನಿ ದುಂಬಿ ಕಾಲುಮುಟ್ಟಿ ನಮಸ್ಕರಿಸಿ ಇವರ ಇಡೀ ತಂಡವನ್ನು ಆತ್ಮೀಯವಾಗಿ ಬೀಳ್ಕೊಟ್ಟ ಘಟನೆಯನ್ನು ಭಾರದ್ವಾಜರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಸಮಾಜದಿಂದ ದೂರವಿರುವ ವ್ಯಕ್ತಿಗಳನ್ನು ಅಸ್ಪೃಶ್ಯರನ್ನಾಗಿ ನೋಡದೆ ಅವರನ್ನು ಸ್ನೇಹದಿಂದ ಮಾತಾಡಿಸಿ, ಮಾನವೀಯತೆಯಿಂದ ಗೌರವಿಸಿ ಅವರ ಪ್ರೀತಿಯನ್ನು ಸಂಪಾದಿಸಿರುವುದು ನಮ್ಮ ಅಯಶ್ಶಿಲ್ಪ ತಂಡದ ಸಾಧನೆ ಹಾಗೂ ಹೆಮ್ಮೆಯ ವಿಷಯ ಎಂದು ಅವರು ಹೇಳುತ್ತಾರೆ
ಕರ್ನಾಟಕ ಗೃಹರಕ್ಷಕ ದಳ
1984ರಿಂದ 2008ರ ವರೆಗೆ 24 ವರ್ಷಗಳ ಸುದೀರ್ಘ ಅವಧಿಗೆ ಕರ್ನಾಟಕ ಗೃಹರಕ್ಷಕ ದಳದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪ್ರಥಮ ಚಿಕಿತ್ಸೆ ತರಬೇತಿ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳ ತರಬೇತಿ – ಎರಡರಲ್ಲೂ ಚಿನ್ನದ ಪದಕಗಳೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ, ನವದೆಹಲಿಯಲ್ಲಿ ಅಗ್ನಿಶಮನ ತರಬೇತಿ ಯಶಸ್ವಿಯಾಗಿ ಪೂರೈಕೆ, ಸುಳ್ಯ ಘಟಕದ ಅಧಿಕಾರಿಯಾಗಿ ಹಾಗೂ ಕಂಪೆನಿ ಕಮಾಂಡರ್ ಆಗಿ ಜವಾಬ್ದಾರಿಗಳ ನಿರ್ವಹಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ.
ವಿದೇಶದಿಂದ ಅರಸಿ ಬಂದಿದ್ದ ಟೋನಿ:
ಕಡಿಮೆ ಖರ್ಚಿನಲ್ಲಿ ತೂಗು ಸೇತುವೆಗಳನ್ನು ನಿರ್ಮಿಸುವ ಗಿರೀಶ್ ಭಾರದ್ವಾಜರ ಬಗ್ಗೆ ತಿಳಿದು ಸ್ವಿಜರ್ಲ್ಯಾಂಡಿನ ಟೋನಿ ಎಂಬವರು ಗಿರೀಶರನ್ನು ಅರಸಿ ಬಂದಿದ್ದರು. ತೂಗು ಸೇತುವೆಗಳ ನಿರ್ಮಾಣಕ್ಕೆ ಇವರಿಗೆ ಶ್ರೀಲಂಕಾ ಸೇರಿ ಹಲವು ವಿದೇಶ ರಾಜ್ಯಗಳಿಂದಲೂ ಇವರಿಗೆ ತೂಗು ಸೇತುವೆಗಳ ನಿರ್ಮಾಣಕ್ಕೆ ಕರೆ ಬಂದಿತ್ತು.
ತಂಡದ ಶ್ರಮಕ್ಕೆ ಸಂದ ಫಲ:
ಪದ್ಮಶ್ರೀ ಪ್ರಶಸ್ತಿ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಿರೀಶ್ ಭಾರದ್ವಾಜರು ಇದು ತಮ್ಮ ಆಯಶ್ಯಿಲ್ಪ ತಂಡಕ್ಕೆ ಸಂದ ಗೌರವ. ಸಹೋದ್ಯೋಗಿಗಳ ಎಲ್ಲರ ಶ್ರಮದಿಂದಾಗಿ ತನಗೆ ಈ ಗೌರವ ಸಂದಿದೆ ಎನ್ನುತ್ತಾರೆ ಗಿರೀಶ್ ಭಾರದ್ವಾಜ್.
ಗಿರೀಶ್ ಭಾರದ್ವಾಜ್ ವ್ಯಕ್ತಿ ಪರಿಚಯ:
ತಾಯಿ: ಶ್ರೀಮತಿ ಲಕ್ಷ್ಮೀ ಅಮ್ಮ
ತಂದೆ: ಶ್ರೀ ಬಿ. ಕೃಷ್ಣ
ಜನನ : 12 – 05 – 1950
ವಿದ್ಯಾರ್ಹತೆ : ಬಿ.ಇ. (ಮೆಕ್ಯಾನಿಕಲ್ ಇಂಜಿನಿಯರಿಂಗ್ – 1973)
ವೃತ್ತಿಜೀವನ: 1975ರಲ್ಲಿ ಗ್ರಾಮೀಣ ಬದುಕಿಗೆ ಸಹಾಯವಾಗುವ ಕಿರು ಉದ್ದಿಮೆ
ಸ್ಥಾಪನೆ. ಕೃಷಿ ಯಂತ್ರೋಪಕರಣಗಳ ದುರಸ್ತಿ, ಗೋಬರ್
ಅನಿಲ ಸ್ಥಾವರ ನಿರ್ಮಾಣ.
ಉದ್ದಿಮೆಯ ಹೆಸರು : “ಅಯಶ್ಶಿಲ್ಪ” [ಅಯಸ್(ಸಂಸ್ಕೃತ-ಕಬ್ಬಿಣ)+ಶಿಲ್ಪ]
1989ರಿಂದ ಗ್ರಾಮೀಣ ಸಂಪರ್ಕಕ್ಕಾಗಿ ತೂಗುಸೇತುವೆಗಳ ನಿರ್ಮಾಣ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶ್ಶಾಗಳಲ್ಲಿ ತೂಗುಸೇತುವೆಗಳ ರಚನೆ.
ಕರ್ನಾಟಕ – 91, ಕೇರಳ – 30, ಆಂಧ್ರಪ್ರದೇಶ – 3, ಒಡಿಶ್ಶಾ- 3
ಈ ತನಕ ಪೂರ್ಣಗೊಳಿಸಿರುವ ಸೇತುವೆಗಳು 127. ಬೆಳಗಾಂ ಜಿಲ್ಲೆಯ ಹುಕ್ಕೇರಿಯಲ್ಲಿ 1999ರಲ್ಲಿ ನಿರ್ಮಿಸಿದ 290ಮೀಟರ್ ಉದ್ದದ ಸೇತುವೆ ಈ ವರೆಗಿನ ನಿರ್ಮಾಣವಾದವುಗಳಲ್ಲಿ ಅತೀ ಉದ್ದವಾದುದು.
ಜೀವನದಿಯ ಸಾರ್ಥಕ ಬಿಂದುಗಳು
1) ಕರ್ನಾಟಕ ಗೃಹರಕ್ಷಕ ದಳ
1984ರಿಂದ 2008ರ ವರೆಗೆ 24 ವರ್ಷಗಳ ಸುದೀರ್ಘ ಅವಧಿಗೆ ಕರ್ನಾಟಕ ಗೃಹರಕ್ಷಕ ದಳದಲ್ಲಿ ಸಾರ್ಥಕ ಸೇವೆ.
ಈ ಸೇವಾವಧಿಯ ಗಮನಾರ್ಹ ಅಂಶಗಳು –
ಪ್ರಥಮ ಚಿಕಿತ್ಸೆ ತರಬೇತಿ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳ ತರಬೇತಿ – ಎರಡರಲ್ಲೂ ಚಿನ್ನದ ಪದಕಗಳೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ; ನವದೆಹಲಿಯಲ್ಲಿ ಅಗ್ನಿಶಮನ ತರಬೇತಿ ಯಶಸ್ವಿಯಾಗಿ ಪೂರೈಕೆ; ಸುಳ್ಯ ಘಟಕದ ಅಧಿಕಾರಿಯಾಗಿ ಹಾಗೂ ಕಂಪೆನಿ ಕಮಾಂಡರ್ ಆಗಿ ಜವಾಬ್ದಾರಿಗಳ ನಿರ್ವಹಣೆ.
2) ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಭಾಗೀದಾರಿಕೆ
ಪುತ್ತೂರು ಕೈಗಾರಿಕಾ ಸಂಘ, ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಬ್ಯಾಂಕ್, ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ, ವಿವೇಕಾನಂದ ಶಿಕ್ಷಣ ಸಂಸ್ಥೆ ಜಾಲ್ಸೂರು ಇವುಗಳ ನಿರ್ದೇಶಕನಾಗಿ ಜವಾಬ್ದಾರಿ ನಿರ್ವಹಣೆ. ಮೂರು ದಶಕಗಳಿಂದ ಸುಳ್ಯ ರೋಟರಿ ಕ್ಲಬ್ ನ ಸಕ್ರಿಯ ಸದಸ್ಯ. ಇವರಿಗೆ ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳು ಲಭಿಸಿವೆ.
‘ಸ್ನೇಹದಿಂದ ಗೆಲ್ಲಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ’ ಅನ್ನುವುದನ್ನು ದೃಢವಾಗಿ ನಂಬಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ನಾನು ಯಶಸ್ವಿಯಾಗಿದ್ದೇನೆ ಅನ್ನುವುದಕ್ಕೆ ನನ್ನ ವೃತ್ತಿಜೀವನದಲ್ಲಿ ಅನುಭವಕ್ಕೆ ಬಂದ ಈ ಘಟನೆಯೇ ಸಾಕ್ಷಿ. 2007ರಲ್ಲಿ ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿರುವ ಲಕ್ನಾವರಂ ಸರೋವರದ ಮೇಲೆ ತೂಗುಸೇತುವೆ ನಿರ್ಮಿಸಲು ಮುಂದಾದಾಗ ಅಲ್ಲಿನ ನಕ್ಸಲ್ ಅನುಯಾಯಿಗಳು ಅಡ್ಡಿ; ಬೆದರಿಕೆ ಒಡ್ಡಿದರು. ಅವರ ಮನವೊಲಿಸಿ ದೃಢ ಸಂಕಲ್ಪದಿಂದ ಕಾರ್ಯ ಕೈಗೆತ್ತಿಕೊಂಡು 4 ತಿಂಗಳುಗಳಲ್ಲಿ ಸೇತುವೆಯನ್ನು ಪೂರ್ಣಗೊಳಿಸಿ ಜನೋಪಯೋಗಕ್ಕೆ ಒದಗಿಸಿಕೊಟ್ಟಾಗ ಅದೇ ವ್ಯಕ್ತಿಗಳು ಕಂಬನಿದುಂಬಿ ಕಾಲುಮುಟ್ಟಿ ನಮಸ್ಕರಿಸಿ ನಮ್ಮ ಇಡೀ ತಂಡವನ್ನು ಆತ್ಮೀಯವಾಗಿ ಬೀಳ್ಕೊಟ್ಟಿರು. ಸಮಾಜದಿಂದ ದೂರವಿರುವ ವ್ಯಕ್ತಿಗಳನ್ನು ಅಸ್ಪೃಶ್ಯರನ್ನಾಗಿ ನೋಡದೆ ಅವರನ್ನು ಸ್ನೇಹದಿಂದ ಮಾತಾಡಿಸಿ, ಮಾನವೀಯತೆಯಿಂದ ಗೌರವಿಸಿ ಅವರ ಪ್ರೀತಿಯನ್ನು ಸಂಪಾದಿಸಿರುವುದು ನಮ್ಮ ಅಯಶ್ಶಿಲ್ಪ ತಂಡಕ್ಕೆ ಅವಿಸ್ಮರಣೀಯ ಅನುಭವ ಹಾಗೂ ಹೆಮ್ಮೆಯ ವಿಷಯ.
4) ಸಾಮಾಜಿಕ ಸಂಸ್ಥೆಗಳಲ್ಲಿ ಜವಾಬ್ದಾರಿಗಳು
1) ಪುತ್ತೂರು ಕೈಗಾರಿಕಾ ಸಂಘದ ನಿರ್ದೇಶಕ
2) ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಬ್ಯಾಂಕಿನ ನಿರ್ಧೆಶಕ
3) ಸ್ನೇಹ ಶಿಕ್ಷಣ ಸಂಸ್ಥೆ, ಸುಳ್ಯ – ಇದರ ನಿರ್ದೇಶಕ
4) ವಿವೇಕಾನಂದ ಶಿಕ್ಷಣ ಸಂಸ್ಥೆ, ವಿನೋಬನಗರ ಜಾಲ್ಸೂರು – ಇದರ ನಿರ್ದೇಶಕ
5) 1972ರಲ್ಲಿ ಕಾಲೇಜು ಮಟ್ಟದ ಈಜು ಚಾಂಪಿಯನ್.