ಮೂಡುಬಿದಿರೆ: ಕರಾವಳಿ ಕರ್ನಾಟಕದ ಪಾರಂಪರಿ ಕಲೆ ಕಂಬಳವನ್ನು ಉಳಿಸುವಂತೆ ಒತ್ತಾಯಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಸಮಿತಿಯ ನೇತೃತ್ವದಲ್ಲಿ ಬೃಹತ್ ಹಕ್ಕೋತ್ತಾಯ ಸಭೆಯು ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ನಡೆಯಿತು.
ಬೃಹತ್ ಜಾಥಾ: ಮೂಡುಬಿದಿರೆ ಸ್ವರಾಜ್ ಮೈದಾನದಿಂದ – ಜೋಡಿಕೆರೆ ಗದ್ದೆಯವರೆಗೆ ಪ್ರತಿಭಟನೆ ನಡೆಯಿತು. 150ಕ್ಕೂ ಅಧಿಕ ಜೋಡಿ ಕೋಣಗಳು, 10 ಸಾವಿರದಷ್ಟು ಜನರು ಹಕ್ಕೋತ್ತಾಯದಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಅನೇಕ ಸಂಘಟನೆಗಳು, ಚಿತ್ರನಟರು, ರಾಜಕಾರಣಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಿದರು.
ಹೋರಾಟದ ಕಿಚ್ಚು: ರಾಜ್ಯದ ಹಲವೆಡೆ ಕಂಬಳ ಪರ ಹೋರಾಟ ನಡೆಯುತ್ತಿದ್ದು, ಮೂಡುಬಿದಿರೆಯಲ್ಲಿನ ಹಕ್ಕೋತ್ತಾಯವು ಅದಕ್ಕೆ ಮತ್ತಷ್ಟು ಬಲ ನೀಡಿತು. ಕಂಬಳಪರ ಘೋಷಣೆ ಕೂರಿದರು. ಕಂಬಳದ ಉಳಿವಿಗಾಗಿ ಸುಗ್ರೀವಾಜ್ಞೆ ರೂಪಿಸಬೇಕೆಂದು ಆಗ್ರಹಿಸಿದರು.ಕಂಬಳ ಹಿಂಸೆ ಎಂದು ಆರೋಪಿಸುವ `ಪೆಟಾ’ ಸಂಸ್ಥೆಯನ್ನು ನಿಷೇಧಿಸಿ ಎನ್ನುವ ಭಿತ್ತಿಪತ್ರ ಕೂಡಾ ಗಮನ ಸೆಳೆಯಿತು.
ಕೊಂಬು, ಕಹಳೆ, ಕಂಬಳದ ಕೋಣಗಳು, ಕಂಬಳ ಕೋಣಗಳ ಯಜಮಾನರು, ರಾಜಕಾರಣಿಗಳು, ಕಲಾವಿದರು, ಸರ್ವಧರ್ಮದ ಮುಖಂಡರು, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಕಂಬಳ ಸಮಿತಿ ವತಿಯಿಂದ ನಡೆದ ಈ ಹಕ್ಕೊತ್ತಾಯ ಮೆರವಣಿಗೆಯಲ್ಲಿ ಸಂಸದ ನಳಿನ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಬಿಜೆಪಿ ಜಗದೀಶ ಅಧಿಕಾರಿ, ಕನ್ಯಾನದ ಸ್ವಾಮೀಜಿ, ಜೆಡಿಎಸ್ ಮುಖಂಡರಾದ ಅಶ್ವಿನ್ ಪಿರೇರಾ, ದಿವಾಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಹಿತ ರಾಜಕೀಯ ಮುಖಂಡರು ಪಾಲ್ಗೊಂಡರು.